ಕಲಬುರಗಿ/ ಚಿತ್ತಾಪುರ: ಪಟ್ಟಣದ ಪುರಸಭೆಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಅನ್ನಪೂರ್ಣ ನಾಗಪ್ಪ ಕಲ್ಲಕ್ ಹಾಗೂ ಉಪಾಧ್ಯಕ್ಷರಾಗಿ ಆತೀಯಾ ಬೇಗಂ ನಜಮೋದ್ದಿನ್ ಅವರು ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಅನ್ನಪೂರ್ಣ ಕಲ್ಲಕ್, ಬಿಜೆಪಿ ಪಕ್ಷದಿಂದ ಸುಶೀಲಾ ದೇವಸುಂಧರ ನಾಮಪತ್ರ ಸಲ್ಲಿಸಿದರು. ಒಟ್ಟು ೨೩ ಸದಸ್ಯರ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಕಲ್ಲಕ್ ಅವರು ೧೮ ಮತಗಳು ಪಡೆಯುವ ಮೂಲಕ ಗೆಲವು ಸಾಧಿಸಿದ್ದಾರೆ. ಬಿಜೆಪಿಯ ಸುಶೀಲಾ ದೇವಸುಂಧರ ಅವರು ೫ ಮತಗಳು ಪಡೆದು ಸೋಲು ಅನುಭವಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆತೀಯಾ ಬೇಗಂ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗಯ್ಯ ಹಿರೇಮಠ ಅವರು ಘೋಷಣೆ ಮಾಡಿದರು.
ಇದೇ ವೇಳೆ ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು.
ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಪಾಶಾ ಖುರೇಶಿ, ಸುಮಂಗಲಾ ಸಣ್ಣೂರಕರ್, ಬೇಬಿಬಾಯಿ ಜಾಧವ, ವಿನೋದ ಗುತ್ತೇದಾರ, ಕಾಶಿಬಾಯಿ ಬೆಣ್ಣೂರ್, ಜಗದೀಶ ಚವ್ಹಾಣ, ಸಂತೋಷ ಚೌದ್ರಿ, ಶ್ರುತಿ ಪೂಜಾರಿ, ಶ್ರೀನಿವಾಗರೆಡ್ಡಿ ಪಾಲಪ್, ಶಹಾರಾಜ ಬೇಗಂ, ಖಾಜಾಬಿ, ಮಹ್ಮದ್ ರಸೂಲ್ ಮುಸ್ತಫಾ, ಶಿವರಾಜ ಪಾಳೇದ್, ನಾಗರಾಜ ಭಂಕಲಗಿ, ಪ್ರಭು ಗಂಗಾಣಿ, ರಮೇಶ ಬಮ್ಮನಳ್ಳಿ, ಶ್ಯಾಮ್ ಮೇಧಾ ಇದ್ದರು.
ವಿಜಯೋತ್ಸವ: ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಂತರ ಕಾಂಗ್ರೆಸ್ ಕಚೇರಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.
ವರದಿ ಮೊಹಮ್ಮದ್ ಅಲಿ, ಚಿತ್ತಾಪುರ
