ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೇ
“ಸ್ತ್ರೀ ” ಎಂದರೆ ಅಷ್ಟೇ ಸಾಕೇ?
ಎಂಬ ಜಿ. ಎಸ್. ಶಿವರುದ್ರಪ್ಪ ರವರ ಕವನವೇ ಹೇಳುವಂತೆ ಪ್ರತಿ ವ್ಯಕ್ತಿಯ ನೋವಿನಲ್ಲೂ, ನಗುವಿನಲ್ಲೂ, ಸೋಲಿನಲ್ಲೂ, ಗೆಲುವಿನಲ್ಲೂ ಹೀಗೆ ಪ್ರತಿ ದಿನ, ಪ್ರತಿ ಕ್ಷಣ ಹೆಣ್ಣಿನ ಪಾತ್ರವಿರುತ್ತದೆ.
ಹುಟ್ಟಿನಿಂದ ಚಟ್ಟದವರೆಗೂ
ಅಮ್ಮಳಾಗಿ,ಸಹೋದರಿಯಾಗಿ, ಪತ್ನಿಯಾಗಿ, ಮಗಳಾಗಿ, ಅಜ್ಜಿಯಾಗಿ, ಅತ್ತೆಯಾಗಿ, ಒಬ್ಬ ಸ್ನೇಹಿತೆಯಾಗಿ ಹೀಗೆ ವಿವಿಧ ಪಾತ್ರಗಳ ಮೂಲಕ ಪ್ರತಿ ವ್ಯಕ್ತಿಯ ಬದುಕಿನಲ್ಲಿ ಜೊತೆಯಾದವಳು ಹೆಣ್ಣು.
ಯತ್ರ ನಾರ್ಯಸ್ತು ಪೂಜ್ಯಂತೆ
ತತ್ರ ರಮಂತೆ ದೇವತಃ
ಎಲ್ಲಿ ಮಹಿಳೆಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಎಂಬ ಮನುವಿನ ಮಾತಿನಂತೆ ಹೆಣ್ಣನ್ನು ಪೂಜಿಸದಿದ್ದರೂ ಪರವಾಗಿಲ್ಲ ಆದರೆ ಇನ್ನೂ ಕೆಲ ಕಡೆ ಅವಳನ್ನು ಸ್ವತಂತ್ರ್ಯಕ್ಕೆ ಅನರ್ಹಳಂತೆ ಮಾಡಿ ಆಚಾರ, ಸಂಪ್ರದಾಯ, ಮೂಢನಂಬಿಕೆಗಳ ಮೂಲಕ ಕಟ್ಟಿ ಹಾಕುತ್ತಿರುವುದು ದುರಂತವೇ ಸರಿ.
ಅನಾದಿ ಕಾಲದಿಂದ ಇಂದಿನವರೆಗೂ ಹೆಣ್ಣೆಂದರೆ ಕೀಳು ಎಂಬ ಮನೋಭಾವನೆ ಅನೇಕ ಕಡೆ ಇದೆ.
ಹೆಣ್ಣು ಮಗು ಜನಿಸಿದರೆ ಜವಾಬ್ದಾರಿಯೆಂದೇ ಭಾವಿಸಿ
ಹೆಣ್ಣು ಎಷ್ಟೇ ಸಾಧನೆ ಮಾಡಿದರೂ ಸಹ ಕೊಟ್ಟ ಮನೆಗೆ ಹೋಗಲೇ ಬೇಕು ಎಂದು ಹೆಜ್ಜೆ – ಹೆಜ್ಜೆಗೂ ನಿಯಮಗಳನ್ನು ಹೇಳುತ್ತಾ ಬೆಳೆಸಲಾಗುತ್ತದೆ.
ಅದು ಏನೇ ಇರಲಿ ಇನ್ನೂ ಕೆಲ ಕಡೆ ಇಂತಹ ಮನೋಭಾವನೆ ಬದಲಾಗಬೇಕಿದೆ. ಅನೇಕ ಬಾರಿ ಇತಿಹಾಸವನ್ನು ಒಮ್ಮೆ ತಿರುಚಿ ನೋಡಿದಾಗ ಮಹಾನ್ ವೀರ ಮಹಿಳೆಯರು ಕಾಣಸಿಗುತ್ತಾರೆ ಅಷ್ಟೇ ಏಕೆ ಇಂದಿಗೂ ಹೆಣ್ಣು ಮಕ್ಕಳು ಪುರುಷರಿಗಿಂತ ಒಂದು ಕೈ ಮೇಲೆಯೇ ಇದ್ದು ಅನೇಕ ಸಾಧನೆ ಮಾಡುತ್ತಿದ್ದಾರೆ. ಈ ಮೂಲಕ ತೊಟ್ಟಿಲನ್ನು ತೂಗುವ ಕೈ ಜಗತ್ತನ್ನು ಆಳ ಬಲ್ಲದು ಎಂಬುದನ್ನು ಪುನಃ ಸಾಬೀತು ಪಡಿಸಿದ್ದಾಳೆ. ಹೆಣ್ಣಿಗೆ ಸಾಂತ್ವನದ ಜೊತೆಗೆ ಪ್ರೋತ್ಸಾಹ, ಧೈರ್ಯ ನೀಡಿದರೆ ಏನನ್ನಾದರೂ ಸಾಧಿಸಬಳ್ಳಲು.
ಕುವರನಾದೊಡೆ ಬಂದ ಗುಣ ವೇನದರಿಂದ
ಕುವರಿಯಾದೊಡೆ ಕುಂದೇನು?
ಎಂಬಂತೆ ಹೆಣ್ಣಾಗಲಿ ಗಂಡಾಗಲಿ ಸಮಾಜದಲ್ಲಿ ಸರಿಸಮಾನರು. ಹೆಣ್ಣು ಮತ್ತು ಗಂಡು ಒಂದೇ ನಾಣ್ಯದ ಎರಡು ಮುಖಗಳು ಹಾಗಾಗಿ ಇನ್ನೂ ಮೇಲು ಕೀಳು ಎಂಬ ಭಾವನೆ ತೊಡೆದು ಹಾಕಬೇಕು.
ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು?
ಎಂಬ ಸಂಚಿ ಹೊನ್ನಮ್ಮಳ ಮಾತಿನಂತೆ ಹೆತ್ತು,ಹೊತ್ತು ,ಸಾಕಿ, ಸಲುಹಿ ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ರೂಪಿಸಿದವಳು ಹೆಣ್ಣು.
ಹೆಣ್ಣು :ಕುಟುಂಬದ -ಸಮಾಜದ ಕಣ್ಣು…ಹೌದು
ತನ್ನವರಿಗಾಗಿ,ತನ್ನ ಕುಟುಂಬಕ್ಕಾಗಿ ಹಗಲಿರುಳು ಶ್ರಮಿಸುವಳು, ತನ್ನ ನೋವು ಎಷ್ಟಿದ್ದರೂ ಸಹಿಸಿಕೊಂಡು ನಗುತಾ ಜೀವಿಸುವಳು. ಕುಟುಂಬದ ಸಂತೋಷಕ್ಕಾಗಿ ತನ್ನ ಚಿಕ್ಕ ಪುಟ್ಟ ಆಸೆಗಳನ್ನೂ ಬಚ್ಚಿಡುವಳು. ಇದ್ದುದರಲ್ಲಿಯೇ ಖುಷಿ ಪಟ್ಟು ಹೆಮ್ಮೆಯಿಂದ ಬದುಕುವಳು.
ಹೆಣ್ಣು….!
ಅವ್ವಳಾಗಿ ಮಮತೆಯ ಹಂಚುವಳು
ಅಮ್ಮಳಾಗಿ ಜೋಪಾನ ಮಾಡುವಳು
ಸಹೋದರಿಯಾಗಿ ಧೈರ್ಯ ತುಂಬುವಳು
ಸ್ನೇಹಿತೆಯಾಗಿ ಪ್ರೋತ್ಸಾಹ ನೀಡುವಳು
ಪತ್ನಿಯಾಗಿ ಬೆನ್ನೆಲುಬಾಗಿ ನಿಲ್ಲುವಳು
ಮಗಳಾಗಿ ಕಾಳಜಿ ವಹಿಸುವಳು
ಹಾಗಾಗಿ…
ಹೆಣ್ಣನ್ನು ಗೌರವಿಸಿ, ಅವಳ ಕನಸುಗಳಿಗೆ ಜೀವ ತುಂಬಿ ಪ್ರೋತ್ಸಾಹಿಸಿ…

- ಆರ್. ಬಿ. ಪ್ರಿಯಾಂಕ, ರಾಯಚೂರು 584101