ನಾನಾ ಕುಚೋದ್ಯ ಕುಹಕಗಳ ನಡುವೆಯೂ
ಬರೋಬ್ಬರಿ ಅರವತ್ತಾರು ಕೋಟಿ ಜನರನ್ನು ಆಕರ್ಷಿಸಿ ತನ್ನೆಡೆ ಸೆಳೆದುಕೊಂಡಿದ್ದು ಸಾಧನೆಯೇ ಸೈ.
ನಲವತ್ತು ಕೋಟಿ ಎಂದು ನಿರೀಕ್ಷಿಸಿದ್ದು ಅರವತ್ತಾರು ಕೋಟಿಗೂ ಮೀರಿ ಬಂದದ್ದು ಹೇಗೆ?
ಇಷ್ಟೊಂದು ಜನ ಮುಗಿಬಿದ್ದು ಬರಲು ಕಾರಣ ಪಾಪಪ್ರಜ್ಞೆಯೇ ? ಹಳೆಯ ಕರ್ಮ ತೊಡೆದು ಕೊಳ್ಳುವ ಹಪಾಹಪಿಯೇ ಅಥವಾ ನಿರ್ಮಲ ಮುಗ್ಧ ಭಕ್ತಿಯೇ ?
ದೈವ ಶ್ರದ್ಧೆಯಂತೂ ಎಲ್ಲಾ ಧರ್ಮೀಯರಲ್ಲೂ ಸಾಕಷ್ಟು ಇದ್ದದ್ದೇ.
ಆದರೆ ಈ ಪ್ರಮಾಣದ ಅಗಾಧ ಜನ ಪ್ರಯಾಗ್ ರಾಜ್ ಗೆ ಮೆದೆ ಮೆದೆಯಾಗಿ ಹೋಗುವುದೆಂದರೆ ?
ಯಾರ ಪ್ರಚೋದನೆ , ಯಾವ ಪ್ರೇರಣೆ , ಯಾರ ಕುಮ್ಮಕ್ಕು , ಫ್ರೀ ಬಸ್ಸು – ರೈಲು ಇತ್ತೇ? ಇದಕ್ಕೆ ಯಾರ ಸಹಾಯಧನ ಕಾರಣ ? ಇದೇ ಛಾನ್ಸು ಅಂತ ಬಿಜೆಪಿ ಎಲ್ಲೆಡೆಯಿಂದ ಜನರನ್ನು ಕುರಿ ತುಂಬಿ ಕಳಿಸಿದಂತೆ ಕಳಿಸಿತೇ ?
ನಿಚ್ಚಳ ಸತ್ಯ ಎಲ್ಲರಿಗೂ ಗೊತ್ತು.
ಹಿಂದೂಗಳನ್ನು, ಅವರ ಆಚರಣೆಗಳನ್ನು ತುಚ್ಛೀಕರಿಸಿ ಕುಹಕವಾಡುವುದು, ಹಿಂದೂ ದೇವರುಗಳನ್ನು ಅವಹೇಳನ ಮಾಡುವುದನ್ನು ಎಪ್ಪತ್ತು ವರ್ಷಗಳಿಂದ ಚಾಳಿ ಮಾಡಿಕೊಂಡ ಮೇಲೆ ಜನಸಾಮಾನ್ಯರಲ್ಲಿ ತಂತಾನೇ ಜಾಗೃತಿ ಮೂಡತೊಡಗಿತು. ಜನರು ತಾನೇ ವೃಥಾ ಬೈಗಳನ್ನು ಎಷ್ಟೆಂದು ಸಹಿಸಿಯಾರು? ಜೊತೆಗೆ ಹಿಂದೂ ಜಾಗೃತಿ ಸಂಘಟನೆಗಳ ನಿರಂತರ ಯತ್ನ. ಕುಹಕಿಗಳು ಕುಟುಕಿ ಬೈದಷ್ಟೂ ಜನ ಹಿಂದೂ ಧಾರ್ಮಿಕತೆಯತ್ತ ವಾಲಿದರು. ತಮ್ಮ ಅಸ್ಮಿತೆ ಯಾವುದೆಂದು ಗೋಚರವಾಗತೊಡಗಿತು. ಟಿ.ವಿಯಲ್ಲಿ ಬಂದ ರಾಮಾಯಣ ಮಹಾಭಾರತ ಸೀರಿಯಲ್ ಗಳು ಅವುಗಳ ಯಶಸ್ಸಿನಿಂದ ಉತ್ತೇಜಿತವಾಗಿ ಬಂದ ನಾನಾ ಪೌರಾಣಿಕ ಧಾರಾವಾಹಿಗಳು ನಂತರದಲ್ಲಿ ಎಲ್ಲಾ ಖಾಸಗಿ ಚಾನಲ್ ಸೀರಿಯಲ್ ಗಳಲ್ಲಿ ಕಡ್ಡಾಯವಾಗಿ ಹಿಂದೂ ಪೂಜೆ ಪುನಸ್ಕಾರಗಳನ್ನು ತೋರಿಸಿದ್ದೇ ತೋರಿಸಿದ್ದು ಮನೆ ಮನೆಗಳಲ್ಲಿ ಅದೇ ಬಗೆಯ ಆಚರಣೆಗಳು ಜಾತಿ ಮತ ಬೇಧವಿಲ್ಲದೆ ನಡೆಯತೊಡಗಿವೆ. ಸಾಮಾಜಿಕ ಜಾಲತಾಣಗಳ ಜಾಗೃತಿಯದು ಸಹ ದೊಡ್ಡ ಕೊಡುಗೆ ಇದೆ.
ನವ ಬೌದ್ಧ ಮಂತ್ರಿ ಮಹೋದಯರು ಹಿಂದೂ ಪೂಜೆ ಪುರಸ್ಕಾರಗಳನ್ನು ಮನೆಯಲ್ಲಿ ಶಾಸ್ರ್ತೋಕ್ತವಾಗಿಯೇ ಮಾಡಿಸುವ ಫೋಟೋಗಳನ್ನು ನೋಡಿದ್ದೇವೆ.
ಅವರವರ ನಂಬಿಕೆಗಳು ಏನೇ ಇರಲಿ ತಮ್ಮ ಸ್ವಂತ ಮನೆಗಳಲ್ಲಿ ವಿಧಿವತ್ತಾಗಿ ಪೂಜೆ ಸಲ್ಲಿಸಬೇಕು ಎಂದು ಹೊರಟಾಗ ಹಿಂದೂ ಪದ್ಧತಿಯನ್ನೇ ಅನುಸರಿಸುವ ಅನಿವಾರ್ಯ ಏಕೆ ? ಕ್ರೈಸ್ತ, ಮುಸಲ್ಮಾನ ಪದ್ಧತಿಯನ್ನು ಅನುಸರಿಸಲಾರರು ಯಾಕೆ?
ಕೊನೆಗೂ ಇದೇ ನಮ್ಮ ಮನೆಯ ಧರ್ಮ ಎಂದಾಗ ಅದು ಹಿಂದೂ ಪದ್ಧತಿಯನ್ನೇ ಆಚರಿಸುವಂತೆ ಮಾಡುತ್ತದೆ.
ಒಂದು ಸಮೀಕ್ಷೆಯಲ್ಲಿ ಹೇಳಿರುವಂತೆ , ಕುಂಭಮೇಳಕ್ಕೆ ಬಂದವರಲ್ಲಿ ಹೆಚ್ಚಿನವರಿಗೆ ತಮ್ಮ ಪಾಪಗಳನ್ನು ತೊಳೆದುಕೊಳ್ಳುವುದಕ್ಕಿಂತ , ಗತಿಸಿದ ತಮ್ಮ ಹಿರಿಯರಿಗೆ ಸದ್ಗತಿ ಕೋರುವುದೇ ಮುಖ್ಯವಾಗಿತ್ತಂತೆ.
ಬದುಕಿದ್ದಾಗ ತಮ್ಮ ತಂದೆ ತಾಯಂದಿರು ಏನೆಲ್ಲಾ ಕಷ್ಟನಷ್ಟಗಳನ್ನು ಅನುಭವಿಸಿದ್ದರೂ ಸುಖಪಡಲಿಲ್ಲವೆಂಬ ಕೊರಗು ಎಲ್ಲಾ ಮಕ್ಕಳಿಗೆ ತಾವು ಚೆನ್ನಾಗಿ ಬಾಳುವ ಬದುಕು ಕಟ್ಟಿಕೊಂಡಾಗ , ಜನ್ಮದಾತರು ಇನ್ನೂ ಉತ್ತಮ ರೀತಿಯಲ್ಲಿ ಬದುಕಲು ಎಲ್ಲ ರೀತಿಯಲ್ಲೂ ಅರ್ಹರಾಗಿದ್ದರು ಎಂಬ ನೋವು ಬಹುತೇಕರಿಗೆ ಇನ್ನೂ ಕೆಲವರು ಹೆತ್ತವರು ಬದುಕಿದ್ದಾಗ ಕಟಕಿಯಾಡಿ ಕಹಿಯಾಗಿ ನಡೆದುಕೊಂಡಿರುತ್ತಾರೆ. ತಮ್ಮ ಕಟುತ್ವಕ್ಕೆ ಹೆತ್ತವರು ನೊಂದು ಬೆಂದದ್ದು ಈಗ ಅರಿವಾಗಿ ಪಾಪ ಪ್ರಜ್ಞೆ ಕಾಡುತ್ತಿರುತ್ತೆ. ಸದ್ಗತಿ ಕೋರುವುದರಿಂದಲಾದರೂ ಪಿತೃಋಣ ತೀರಿಸ ಬಹುದೆಂಬ ಆಕಾಂಕ್ಷೆ ಅಷ್ಟೊಂದು ಜನರನ್ನು ಎಳೆತರಲು ಮುಖ್ಯ ಕಾರಣವಂತೆ .
ಉಳಿದವರಲ್ಲಿ ಹಿಂದೂ ಧಾರ್ಮಿಕ ಜಾಗೃತಿ , ಮೋಜಿನ ಭೇಟಿ ಎಲ್ಲವೂ ಸೇರಿವೆ.
144 ವರ್ಷಕ್ಕೊಮ್ಮೆ ಎಂಬುದೇ ಭೇಟಿಯ ಒತ್ತಾಸೆಗೆ ಮುಖ್ಯ ಕಾರಣ
ಅಂತೂ ಯಾವುದೋ ಒಂದು ಕಾರಣ.
ಭರತಖಂಡದ ಇಷ್ಟೊಂದು ಜನರಿಗೆ ತಮ್ಮ ಸ್ವಂತ ಧರ್ಮ ಯಾವುದೆಂಬ ಜಾಗೃತಿ ಮೂಡಿತಲ್ಲಾ ? ಅದು ಎಲ್ಲಕ್ಕಿಂತ ಬಹುಮುಖ್ಯ. ಮೂರು ಮತ್ತೊಂದು ಚಿಲ್ರೆ ಪಕ್ಷಗಳು ತಮ್ಮ ಅಧಿಕಾರ ಲಾಲಸೆಗಾಗಿ ಎಲ್ಲಾ ಧರ್ಮಗಳನ್ನೂ ಒತ್ತೆ ಇಟ್ಟುಕೊಂಡು ಆಟವಾಡಿಸುತ್ತಿರುವ ಈ ದಿನಗಳಲ್ಲಿ ಹಿಂದೂಗಳಿಗೆ ಒಂದು ಜಾಗೃತಿ ಬೇಕಿತ್ತು. ಅದು ಪರಮತಗಳನ್ನು ದ್ವೇಷಿಸುವುದಕ್ಕಲ್ಲ, ತನ್ನದೇ ಅಸ್ತಿತ್ವ ಕಾಪಾಡಿಕೊಳ್ಳುವುದಕ್ಕೆ.
ಇವತ್ತು ಕ್ರೈಸ್ತರು ಮುಸ್ಲಿಮರು ತಮ್ಮ ಧಾರ್ಮಿಕ ಶ್ರದ್ಧೆಯನ್ನು ನಿಯಮಿತವಾಗಿ ಆಚರಿಸಲು ವ್ಯವಸ್ಥೆ ಮಾಡಿ ಕೊಂಡಿದ್ದಾರೆ. ಪ್ರತಿ ಭಾನುವಾರ ಕ್ರೈಸ್ತರು ಕುಟುಂಬ ಸಮೇತ ಚರ್ಚ್ ಗೆ ಅಚ್ಚುಕಟ್ಟಾದ ಉಡುಗೆ ತೊಡುಗೆಯಲ್ಲಿ ಹೋಗುತ್ತಾರೆ. ಮುಸ್ಲಿಮರು ಐದು ಬಾರಿ ನಮಾಜ್ ಮಾಡುವುದಷ್ಟೇ ಅಲ್ಲ , ಪ್ರತಿ ಶುಕ್ರವಾರ ಮಸೀದಿಗೆ ತಪ್ಪದೇ ಭೆಟ್ಟಿ ನೀಡುತ್ತಾರೆ. ಭಗವಂತನ ಸಾನಿಧ್ಯದ ಅನುಭೂತಿ ಪಡೆಯುತ್ತಾರೆ.
ಅದೇ ಹಿಂದೂಗಳು?
ಗ್ಯಾನ ಬಂದ ಗಿರಾಕಿಗಳು ಹೋದರೆ ಹೋದ್ರು. ಇಲ್ಲದಿದ್ರೆ ಇಲ್ಲವೇ ಇಲ್ಲ. ಹಬ್ಬದ ದಿನವೂ ದೇವಾಲಯಕ್ಕೆ ಹೋಗರು. ಅವರ ಭಕ್ತಿ ಏನಿದ್ದರೂ ಸಂಕಟ ಬಂದಾಗ ವೆಂಕಟರಮಣ!
ಈ ಅಶಿಸ್ತಿನ ಸಮುದಾಯಕ್ಕೆ ಮಹಾ ಕುಂಭಮೇಳ ತಮ್ಮ ಅಸ್ಮಿತೆ ನೆನಪಿಸಿದೆ. ತಾನ್ಯಾರು ಎಂಬುದಕ್ಕೆ ಉತ್ತರ ಒದಗಿಸಿದೆ.
ವಿಪಕ್ಷಗಳಿಗೆ ಹಿಂದೂಗಳ ಒಗ್ಗೂಡುವಿಕೆಗೆ ಇನ್ನಿಲ್ಲದ ತಳಮಳ. ಎಲ್ಲಿ ಈ ಜನರ ಮತಗಳೆಲ್ಲವೂ ಬಿಜೆಪಿ ಜೋಳಿಗೆಗೆ ಬೀಳುತ್ತವೋ ಎಂಬ ಭಯ!
ಅಂತಹುದೇನೂ ಆಗದು. ವಿಪಕ್ಷಗಳ ಹಿಂದೂ ವೈರತ್ವದ ಹೀನತನದಿಂದಾಗಿ ಕೆಲವು ಮತ ಬಿಜೆಪಿಯತ್ತ ವಾಲಬಹುದೇನೋ ? ಎಲ್ಲರದೂ ಅಲ್ಲ. ಅಯೋಧ್ಯೆಯ ನೆಲದಲ್ಲೇ ಬಿಜೆಪಿ ಹೀನಾಯವಾಗಿ ಸೋಲಲಿಲ್ಲವೇ ?
ಆದರೆ ಜನತೆ ಯಾರನ್ನು ಆಯ್ಕೆ ಮಾಡಬೇಕೋ ಅವರನ್ನೇ ಮಾಡುತ್ತಾರೆ. ಹಿಂದುತ್ವದ ಜಾಗೃತಿಗೂ ಮತದಾನಕ್ಕೂ ಲಿಂಕ್ ಕಡಿಮೆ.
- ಜೆ. ಬಿ.ರಂಗಸ್ವಾಮಿ, ವಿಶ್ರಾಂತ ಪೊಲೀಸ್ ಅಧಿಕಾರಿ , ಮೈಸೂರು