ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಕಡಿಮೆ ವಿದ್ಯಾರ್ಥಿಗಳು ಹಾಜರಾಗುತ್ತಿದ್ದರೂ ಎಲ್ಲಾ ವಿದ್ಯಾರ್ಥಿಗಳಿಗೂ ಹಾಜರಾತಿ ಹಾಕಿ ಪ್ರತಿ ವಿದ್ಯಾರ್ಥಿಗೆ ಸರ್ಕಾರ ನೀಡುವ ಮಾಸಿಕ 1,700 ರೂ.ಗಳಂತೆ ಪ್ರತಿ ತಿಂಗಳು ಲಕ್ಷಾಂತರ ರೂ.ಗಳನ್ನು ವಾರ್ಡನ್ ಹಾಗೂ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ತಾಲ್ಲೂಕಿನ ಹಿರಿಯ ದಲಿತ ಮುಖಂಡರು ಹಾಗೂ ತಾಲ್ಲೂಕು ದರಖಾಸ್ತು ಕಮಿಟಿ ಸದಸ್ಯರಾದ ಬಸ್ತಿ ರಂಗಪ್ಪ ಗಂಭೀರ ಆರೋಪ ಮಾಡಿದರು.
ಪಟ್ಟಣ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಸಚಿವ.ಎಚ್.ಸಿ. ಮಹದೇವಪ್ಪ ಅವರಿಗೆ ಬರೆದಿರುವ ಪತ್ರವನ್ನು ಬಿಡುಗಡೆ ಮಾಡಿದರು.
ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 7 ಮೆಟ್ರಿಕ್ ಪೂರ್ವ ಮತ್ತು ಎರಡು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳು ಸೇರಿ ಒಟ್ಟು 12 ಹಾಸ್ಟೆಲ್‌ಗಳಿದ್ದು, ಇವುಗಳ ನಿರ್ವಹಣೆಗೆ ಕೇವಲ 3 ಮಂದಿ ಮಾತ್ರ ವಾರ್ಡನ್ ಗಳಿದ್ದಾರೆ. ಒಬ್ಬ ವಾರ್ಡನ್ 4 ಹಾಸ್ಟೆಲ್‌ಗಳ ಜವಾಬ್ದಾರಿಯಂತೆ ಮೂರು ಮಂದಿಗೆ 12 ವಿದ್ಯಾರ್ಥಿ ನಿಲಯಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದೆ. ಮಕ್ಕಳ ಸುರಕ್ಷತೆ ಇಲ್ಲದಂತಾಗಿದೆ. ಮಕ್ಕಳಿಗೆ ಅತ್ಯಗತ್ಯವಾಗಿ ನೀಡಬೇಕಾದ ಯಾವುದೇ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಪ್ರಮುಖವಾಗಿ ಸ್ನಾನಕ್ಕೆ ಬಿಸಿ ನೀರನ್ನೂ ನೀಡುತ್ತಿಲ್ಲ. ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ರಜಾ ದಿನಗಳಲ್ಲಿ ಮಕ್ಕಳನ್ನು ಬಲವಂತವಾಗಿ ಮನೆಗೆ ಹೋಗುವಂತೆ ಒತ್ತಡ ಹೇರಲಾಗುತ್ತಿದೆ. ಕಡಿಮೆ ಮಕ್ಕಳು ವಿದ್ಯಾರ್ಥಿ ನಿಲಯದಲ್ಲಿ ಹಾಜರಿದ್ದರೂ ಎಲ್ಲಾ ವಿದ್ಯಾರ್ಥಿಗಳು ಹಾಜ ರಾಗುತ್ತಿದ್ದಾರೆ ಎಂದು ಹಾಜರಾತಿ ಪುಸ್ತಕದಲ್ಲಿ ದಾಖಲಿಸಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿ ಹಾಸ್ಟೆಲ್ ವಾರ್ಡನ್ ಮತ್ತು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ಪರಸ್ಪರ ಶಾಮೀಲಾಗಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಅವ್ಯವಹಾರದ ಬಗ್ಗೆ ಹಲವಾರು ಬಾರಿ ತಾಲ್ಲೂಕು ಸಹಾಯಕ ನಿರ್ದೇಶಕರಿಗೆ ಮತ್ತು ಜಿಲ್ಲಾ ಉಪ ನಿರ್ದೇಶಕರಿಗೆ ಮೌಖಿಕವಾಗಿ ಮತ್ತು ದೂರವಾಣಿ ಮೂಲಕ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಒಬ್ಬರೇ ವಾರ್ಡನ್ ಹಲವು ಹಾಸ್ಟೆಲ್ ಗಳನ್ನು ನಿರ್ವಹಣೆ ಮಾಡುತ್ತಿರುವ ಕಾರಣ ಹಾಸ್ಟೆಲ್‌ಗಳಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಕೆ.ಆರ್. ಪೇಟೆ ಪಟ್ಟಣ ದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಇದಕ್ಕೆಲ್ಲಾ ಕಾರಣ ಒಬ್ಬರೇ ವಾರ್ಡನ್ ಹಲವು ಹಾಸ್ಟೆಲ್‌ಗಳ ನಿರ್ವಹಣೆಯ ಹೊಣೆ ತೆಗೆದುಕೊಂಡಿರುವುದು. ಹಾಗಾಗಿ ಹಾಸ್ಟೆಲ್‌ಗಳಲ್ಲಿ ಮಕ್ಕಳ ಸುಳ್ಳು ಹಾಜರಾತಿ ಹೆಸರಿನಲ್ಲಿ ಲೂಟಿ ಮಾಡುತ್ತಿರುವವ ವಿರುದ್ದ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್‌ಗಳಲ್ಲಿರುವ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು. ಎಂದು ಸಚಿವರನ್ನು ಒತ್ತಾಯಿಸಿದರು.
ದಲಿತ ಮುಖಂಡರಾದ ಕಿಕ್ಕೇರಿ ರಾಜಣ್ಣ, ಛಲವಾದಿ ಮಹಾಸಭಾ ಮಾಜಿ ಅಧ್ಯಕ್ಷ ಮುದುಗೆರೆ ಮಹೇಂದ್ರ, ತಾಲೂಕು ಉಪಾಧ್ಯಕ್ಷ ಬಂಡಿಹೊಳೆ ಕೃಷ್ಣಮೂರ್ತಿ, ಎಂ.ಕೆ.ರಾಜಶೇಖರ್, ಚಿಕ್ಕಗಾಡಿಗಾನಹಳ್ಳಿ ಸೋಮಶೇಖರ್, ವಿವೇಕ್, ವಿಂವೆ, ಬಾಂಹವೆ, ಹರಿಹರಪುರ ರಂಗರಾಮು, ಶಾಂತಮ್ಮ, ಪದ್ಮಾವತಿ ಉಪಸ್ಥಿತರಿದ್ದರು.