ಶಿವಮೊಗ್ಗ: ಮಹಿಳಾ ಸಬಲೀಕರಣಕ್ಕೆ ಸಮಾನತೆ ಮತ್ತು ಪ್ರಗತಿಯ ಸೇರ್ಪಡೆಯಾದಾಗ ಮಹಿಳೆ ಸಶಕ್ತಳಾಗಲು ಸಾಧ್ಯ ಎಂದು ಜನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ವಾಣಿಕೋರಿಯವರು ಜನ ಶಿಕ್ಷಣ ಸಂಸ್ಥೆ ಮತ್ತು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ (ರಿ.), ಸಹಯೋಗದಲ್ಲಿ ದಿನಾಂಕ 08.3.2025ರಂದು ಸಂಸ್ಥೆಯ ಆವರಣದಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಮಾಹಿತಿ ಮತ್ತು ಯಶಸ್ವಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ (ಘಟಿಕೋತ್ಸವ) ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ನುಡಿದರು.
ಮುಂದುವರೆದು ಮಾತನಾಡುತ್ತಾ ಮಹಿಳೆಯರಿಗೆ ಜೀವನದಲ್ಲಿ ಅಡೆ-ತಡೆಗಳು ಬಂದೇ ಬರುತ್ತವೆ ಅದನ್ನು ಮೀರಿ ನಡೆದರೆ ಯಶಸ್ಸು ಸಾಧ್ಯ. ಮೊದಲು ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು. ನಾವೆಲ್ಲಾ ಹೋರಾಟದ ಹಾದಿಯನ್ನು ಹಿಡಿದಾಗ ಮಾತ್ರ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಂತಹ ಜನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿವಮೊಗ್ಗ ಶಾಂತಲಾ ಅಟೋಮೇಷನ್ ಪ್ರೈ. ಲಿ. ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಎ. ಎಲ್. ಚಂದ್ರಶೇಖರ್ ರವರು ವಿವಿಧ ಕೌಶಲ್ಯ ತರಬೇತಿಗಳನ್ನು ಪಡೆದ ಯಶಸ್ವೀ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡುತ್ತಾ ಪ್ರಮಾಣಪತ್ರಕ್ಕೆ ಬೆಲೆ ತಂದು ಕೊಡುವ ಕೆಲಸವನ್ನು ನೀವು ಮಾಡಬೇಕು. ಡಿಜಿಟಲ್ ಮಾರ್ಕೆಟಿಂಗ್ ಬಳಸಿಕೊಂಡು ನಿಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಎಸ್. ವೈ. ಅರುಣಾದೇವಿಯವರು ಮಾತನಾಡುತ್ತಾ ಭಾರತ ಸರಕಾರವು ಶಿವಮೊಗ್ಗ ಜನ ಶಿಕ್ಷಣ ಸಂಸ್ಥೆಗೆ ವಿವಿಧ ಅಭಿನಂದನಾ ಪತ್ರ ಗಳನ್ನು ನೀಡಿರುವುದು ಸಂಸ್ಥೆಗೆ ಹೆಮ್ಮೆ ಮತ್ತು ಶ್ಲಾಘನೀಯ ಎಂದರು. ಇದರ ಸದ್ಭಳಕೆಯನ್ನು ಶಿವಮೊಗ್ಗ ಜಿಲ್ಲೆಯ ಎಲ್ಲಾ ಕಲಿಕಾರ್ಥಿಗಳು ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ