ಬಳ್ಳಾರಿ / ಕಂಪ್ಲಿ : ವಿದ್ಯುತ್ ಸರಬರಾಜು ಪೂರೈಕೆಯಲ್ಲಿ ವ್ಯತ್ಯವಾಗುತ್ತಿದ್ದು, ಈ ಸಮಸ್ಯೆಗೆ ಮುಕ್ತಿ ನೀಡಿ, ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ, ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ನೇತೃತ್ವದಲ್ಲಿ ರೈತರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಜೆಸ್ಕಾಂ ಕಛೇರಿವರೆಗೆ ಮೆರವಣಿಗೆ ನಡೆಸಿ, ನಂತರ ಪ್ರತಿಭಟಿಸಿದರು.
ನಂತರ ಜಿಲ್ಲಾಧ್ಯಕ್ಷ ಬಿ. ಗಂಗಾಧರ ಹಾಗೂ ತಾಲೂಕು ಅಧ್ಯಕ್ಷ ಗುಬಾಜಿ ರಾಮಾಂಜಿನಿ ಮಾತನಾಡಿ, ಕಂಪ್ಲಿ, ತಾಲೂಕಿನ ರಾಮಸಾಗರ, ಕಣಿವೆ ತಿಮ್ಮಲಾಪುರ, ನಂ.10 ಮುದ್ದಾಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆಯಾಗಿದೆ. ರಾತ್ರಿ ವೇಳೆಯಲ್ಲಿ ವಿದ್ಯುತ್ ನೀಡುವುದರಿಂದ ರೈತರಿಗೆ ಕರಡಿ, ಚಿರತೆ ಮತ್ತು ಹಾವುಗಳಿಂದ ಹಾನಿ ಆಗಿರುತ್ತದೆ. ರಾತ್ರಿ ವೇಳೆಯಲ್ಲಿ ಪಂಪ್ಸೆಟ್ ಮೋಟರ್ ಚಾಲನೆ ಮಾಡುವ ಸಮಯದಲ್ಲಿ ವಿದ್ಯುತ್ ಅಪಘಾತ ಆಗುವ ಸಂಭವ ಇರುತ್ತದೆ. ಇದಕ್ಕೆ ಯಾರು ಹೊಣೆಗಾರರು ಜೆಸ್ಕಾಂ ಅಧಿಕಾರಿಗಳು ಹೊಣೆಗಾರರು ಆಗಿರುತ್ತಾರೆ. ಭತ್ತ ಇನ್ನಿತರ ಬೆಳೆಗಳು ತೆನೆ ಬಿಡುವ ಸಮಯದಲ್ಲಿ ವಿದ್ಯುತ್ ವ್ಯತ್ಯಯದಿಂದ ನೀರಿನ ಸಮಸ್ಯೆ ಆಗಿರುತ್ತದೆ. ಆದ ಕಾರಣ ತಾವುಗಳು ಬೆಳಿಗ್ಗೆ 4 ಗಂಟೆಯಿಂದ 11 ಗಂಟೆವರೆಗೆ ಮತ್ತು ಮುಂದಿನ ವಾರದಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ (ಸರ್ಕಾರ ಆದೇಶದ ಪ್ರಕಾರ 7 ತಾಸು ನೀಡಬೇಕೆಂದು ಇದೆ) ಪಂಪ್ಸೆಟ್ಗೆ ವಿದ್ಯುತ್ ಕೊಡಬೇಕು. ರೈತರ ಹಿತ ಕಾಪಾಡುವ ಜತೆಗೆ ಬೆಳೆಗಳನ್ನು ಸಂರಕ್ಷಿಸಲು ಹಗಲಿನಲ್ಲಿ 7 ತಾಸು ವಿದ್ಯುತ್ ಪೂರೈಕೆ ಮಾಡಿದರೆ, ಅನುಕೂಲವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಗಮನ ಹರಿಸಿ, ವಿದ್ಯುತ್ ಸಮಸ್ಯೆಯಾಗದಂತೆ ಸೂಕ್ತಕ್ರಮವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಹೋರಾಟದ ರೂಪ ಉಗ್ರವಾಗಿರುತ್ತದೆ ಎಂದರು.
ತದ ನಂತರ ಜೆಸ್ಕಾಂ ಎಇಇ ಮಲ್ಲಿಕಾರ್ಜುನಗೌಡ ಇವರು ಕೆಲ ಕಾಲ ರೈತರೊಂದಿಗೆ ಸಮಾಲೋಚಿಸಿ, ವಿದ್ಯುತ್ ಪೂರೈಕೆ ಸಂಬಂಧಿಸಿದಂತೆ ಪ್ರತಿಯೊಂದು ವಿಷಯಗಳನ್ನು ಎಳೆ ಎಳೆಯಾಗಿ ಬಿಡಿಸಿ, ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವುದು ನಮ್ಮ ಜವಾಬ್ದಾರಿ, ಈ ನಿಟ್ಟಿನಲ್ಲಿ ಸಮಸ್ಯೆಯಾಗದಂತೆ ಸೂಕ್ತಕ್ರಮವಹಿಸಲಾಗುವುದು ಎಂದರು.
ಎಇಇಗೆ ಮನವಿ ಪತ್ರ ಸಲ್ಲಿಸಿದ ನಂತರ ರೈತರು ಹೋರಾಟ ಹಿಂಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಗಂಗಾಧರ ಜೆ, ಯುವ ಘಟಕ ಜಿಲ್ಲಾ ಅಧ್ಯಕ್ಷ ಹರ್ಷಿತ್, ಉಪಾಧ್ಯಕ್ಷ ಹುಳ್ಳಿರಾಮು, ಕಾರ್ಯದರ್ಶಿ ಮುಸ್ತಫ ಸಿ, ಮಲ್ಲಿಕಾರ್ಜುನ ಸಿ, N. ಶಿವಪ್ಪ, ಗ್ರಾಮ ಘಟಕದ ಅಧ್ಯಕ್ಷರಾದ ನಾಗಪ್ಪ ಕುರಿ, ಬಿ. ಶಂಕರ್, ಜೋಗಿನ ಮಂಜು. ರೈತ ಮುಖಂಡರಾದ ನೀಲಪ್ಪ, ಗೋಪಿ, ಚಲುವಾದಿ ಲಕ್ಷ್ಮಣ, ಚೆಲುವಾದಿ ಗಾಳಪ್ಪ, ಉಪ್ಪಾರ ಹನುಮಂತಪ್ಪ, ಬಾರಿಕಾರ ದುರ್ಗಪ್ಪ, ಕೆ. ಪ್ರದೀಪ್ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್