ಕಲಬುರಗಿ/ ಚಿತ್ತಾಪುರ: ಆರೋಗ್ಯದ ಹಿತದೃಷ್ಟಿಯಿಂದ ರಾಸಾಯನಿಕ, ಹಾನಿಕಾರಕ ಬಣ್ಣ ಉಪಯೋಗಿಸದೆ ನೈಸರ್ಗಿಕ ಬಣ್ಣ ಉಪಯೋಗಿಸಿ ಎಲ್ಲರೂ ಸಂಭ್ರಮದಿಂದ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಹೋಳಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾರಿಗೂ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚಬೇಡಿ, ನಾವು ಆಚರಿಸುವ ಹಬ್ಬ ಇತರರಿಗೆ ತೊಂದರೆ ಆಗಬಾರದು. ಹೋಳಿ ಹಬ್ಬದ ಜೊತೆಗೆ ಮುಸ್ಲಿಂರ ಪವಿತ್ರ ರಂಜಾನ್ ಹಬ್ಬ ಹಾಗೂ ಪಿಯು ದ್ವಿತೀಯ ವರ್ಷದ ಪರೀಕ್ಷೆ ಇರುವುದರಿಂದ ಯಾರಿಗೂ ತೊಂದರೆಯಾಗದಂತೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಎಂದು ಕರೆ ನೀಡಿದರು.
ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಬಣ್ಣ ಆಡುವ ಮಾರ್ಗ ಹಾಗೂ ಹೆಚ್ಚು ಜನ ಸೇರುವ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಿ ಶಾಂತಿ ಸುವ್ಯವಸ್ಥೆ ಕಾಪಾಡಿ, ಈ ನಿಟ್ಟಿನಲ್ಲಿ ಹೋಳಿ ಹಬ್ಬದ ಯಶಸ್ವಿಗೆ ಪಟ್ಟಣದ ಜನತೆ ಕೂಡ ಸಹಕರಿಸಬೇಕು ಎಂದು ಹೇಳಿದರು.
ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ಮಾ.13 ಕ್ಕೆ ಕಾಮದಹನ ದಿನದಂದು ಎಲ್ಲರೂ ಜಾಗೃತರಾಗಿ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಮಾ.14 ದುಲಂಡಿ ದಿನದಂದು ಬೆಳಿಗ್ಗೆಯಿಂದ 12.30 ಗಂಟೆಯವರೆಗೆ ಬಣ್ಣವಾಡಲು ಅವಕಾಶ ನೀಡಲಾಗಿದೆ ಎಲ್ಲರೂ ನಿಗದಿತ ಅವಧಿಯಲ್ಲಿ ಬಣ್ಣದ ಆಟ ಮುಗಿಸಬೇಕು ಎಂದು ಕಿವಿಮಾತು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, ಪಟ್ಟಣದ ಜನತೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪುರಸಭೆ ವತಿಯಿಂದ ಸಕಾಲದಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಕಾಳಗಿ, ವಿಠಲ್ ಕಟ್ಟಿಮನಿ, ಜಗದೀಶ್ ಚವ್ಹಾಣ, ರವೀಂದ್ರ ಸಜ್ಜನಶೆಟ್ಟಿ, ಅಂಬರೀಶ್ ಸುಲೇಗಾಂವ ಮಾತನಾಡಿದರು.
ಅಗ್ನಿಶಾಮಕದಳದ ಅಧಿಕಾರಿ ನಾಗರಾಜ್, ಜೆಸ್ಕಾಂ ಇಲಾಖೆಯ ಅಧಿಕಾರಿ ಮಡಿವಾಳಪ್ಪ, ಮುಖಂಡರಾದ ಆನಂದ ಪಾಟೀಲ ನರಿಬೋಳ, ಅನಿಲ ವಡ್ಡಡಗಿ, ಅಹ್ಮದ್ ಸೇಠ್, ಸುರೇಶ್ ಬೆನಕನಳ್ಳಿ, ಮಲ್ಲಿಕಾರ್ಜುನ ಬೆಣ್ಣೂರಕರ್, ರಾಜು ಕುಲಕರ್ಣಿ, ರಫೀಕ್ ಲಿಂಕ್, ಅಂಬಾದಾಸ್ ತಿರುಮಲ್, ಮಹಾದೇವ ಅಂಗಡಿ, ನಾಗೇಂದ್ರ ಬುರ್ಲಿ, ಬಾಲಾಜಿ ಬುರಬುರೆ, ಕ್ರೈಂ ಪಿಎಸ್ಐ ಚಂದ್ರಮಪ್ಪ, ಸಿಬ್ಬಂದಿಗಳಾದ ದತ್ತು ಜಾನೆ, ಸವಿಕುಮಾರ ಸೇರಿದಂತೆ ಇತರರು ಇದ್ದರು
ಪಿಎಸ್‌ಐ ಶ್ರೀಶೈಲ್ ಅಂಬಾಟಿ ಸ್ವಾಗತಿಸಿದರು, ಪಿ.ಸಿ ಮಹೇಶ್ ರುಮಾಲ್ ನಿರೂಪಿಸಿದರು.
ವರದಿ ಮೊಹಮ್ಮದ್ ಅಲಿ ಚಿತ್ತಾಪುರ