ಬಳ್ಳಾರಿ / ಕಂಪ್ಲಿ : ಶಿಕ್ಷಕರ ಪಾಠ, ಪ್ರವಚನ ಆಲಿಸುವ ಜತೆಗೆ ಮನೆಯಲ್ಲಿ ಮತ್ತೊಮ್ಮ ಮನದಟ್ಟು ಮಾಡಿಕೊಂಡರೆ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯ ಎಂದು ಕಿಯೋನಿಕ್ಸ್ ಸಂಸ್ಥೆಯ ಪ್ರಾಂಶುಪಾಲ ಜಿಲಾನಸಾಬ್ ಬಡಿಗೇರ್ ಹೇಳಿದರು.
ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಡಾ.ಪುನೀತ್ ರಾಜಕುಮಾರ ವೃತ್ತದ ಬಳಿಯಲ್ಲಿರುವ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸರಸ್ವತಿ ಪೂಜೆ ಹಾಗೂ ಎಸ್.ಎಸ್.ಎಲ್.ಸಿ ಮಕ್ಕಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದಿನ ದಿನಮಾನದಲ್ಲಿ ಮಕ್ಕಳ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗೆ ಸಾಕಷ್ಟು ಸಹಕಾರವಿದೆ. ಆದರೆ, ಮಕ್ಕಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳದೇ, ಗುಣಮಟ್ಟದ ಶಿಕ್ಷಣದೊಂದಿಗೆ ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ವರದಿಗಾರ ಎಸ್.ಯಮನಪ್ಪ ಮಾತನಾಡಿ, ಮಕ್ಕಳಲ್ಲಿ ಶಿಕ್ಷಣದ ಜೊತೆ ಜೊತೆಗೆ ಸಂಸ್ಕೃತಿ, ಸಂಸ್ಕಾರಗಳು ಅಗತ್ಯವಾಗಿವೆ. ನಿರಂತರ ಕಲಿಕೆ ಮತ್ತು ವಿದ್ಯಾಭ್ಯಾಸ ಮಾಡುವುದರಿಂದ ಮಕ್ಕಳ ಶೈಕ್ಷಣಿಕ ಮಟ್ಟ ವೃದ್ದಿಸುತ್ತದೆ. ಭಯ, ಅಂಜಿಕೆ ಇಲ್ಲದೆ, ಪರೀಕ್ಷೆ ಎದುರಿಸುವ ಕಾರ್ಯಗತ ಮಾಡಿಕೊಳ್ಳಬೇಕು. ಮೊಬೈಲ್, ಟಿವಿ ಹಾಗೂ ಸಾಮಾಜಿಕ ಮಾಧ್ಯಮ ಬಳಕೆಯು ವಿದ್ಯಾರ್ಥಿಗಳಲ್ಲಿ ನೆನಪಿನ ಶಕ್ತಿ ಹಾಗೂ ಏಕಾಗ್ರತೆ ಕುಂದಿಸುತ್ತದೆ ಎಂದರು.
ನಂತರ ಕಂಪ್ಯೂಟರ್ ಶಿಕ್ಷಕಿ ಅಕ್ಕಮಹಾದೇವಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನ ಕೌಶಲ್ಯದ ತರಬೇತಿ ನೀಡಿದಾಗ ಮಾತ್ರ ಭವಿಷ್ಯ ಉಜ್ವಲವಾಗಿರುತ್ತದೆ. ಶಿಕ್ಷಣ ಕಲಿಯಬೇಕಾದರೆ ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಛಲ, ಪ್ರಾಮಾಣಿಕ ಪ್ರಯತ್ನ ಮಾಡಿದರೆ ಜೀವನದಲ್ಲಿ ಮುಂದುವರೆಯಲು ಸಾಧ್ಯ ಎಂದರು.
ತದ ನಂತರ ಮಕ್ಕಳು ತಮ್ಮ ಅನಿಸಿಕೆ, ಹಾಡು ವ್ಯಕ್ತಪಡಿಸಿದರು. ಇನ್ನೂ ಕೆಲ ಮಕ್ಕಳು ಚಿಕ್ಕ ಮತ್ತು ಚೊಕ್ಕದಾದ ಮಾತುಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಈ ಸಂದರ್ಭದಲ್ಲಿ ವರದಿಗಾರ ದ್ಯಾಮನಗೌಡ ಪಾಟೀಲ್, ಶಿಕ್ಷಕಿಯರಾದ ಸುಧಾ, ಮಧುಶ್ರೀ, ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ ರಾಜಶೇಖರ, ಕುಮಾರ, ಎ.ವಿರೇಶ, ಫಿರ್ದೋಸ್, ಗಗನಾ, ಪ್ರಿಯಾಂಕ, ಅಮೀನಾ, ಪೂಜಾ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್