ಬಳ್ಳಾರಿ/ ಕಂಪ್ಲಿ : ಕಂಪ್ಲಿಯಲ್ಲಂತೂ ಹೋಳಿ ಹುಣ್ಣಿಮೆ ಆಚರಿಸಲು ಯುವ ಜನಾಂಗ ಸಿದ್ಧರಾಗಿದ್ದಾರೆ. ಕಾಮಣ್ಣ ಈಗಾಗಲೇ ಭಕ್ತರಿಂದ ಪೂಜೆಗೊಳ್ಳಲು ಸಿದ್ಧನಾಗಿದ್ದಾನೆ.
ಕಾಮಣ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ 5 ದಿನಗಳ ಕಾಲ ಪೂಜಿಸಲಾಗುತ್ತದೆ, ಹೋಳಿ ಹಬ್ಬದ ಸಮಯದಲ್ಲಿ ಕಾಮಣ್ಣನ ಮೂರ್ತಿಯನ್ನು ಪ್ರಾರ್ಥಿಸಿ ಪೂಜಿಸುತ್ತಾರೆ.
ಭಕ್ತಿಯಿಂದ ಭಜಿಸುವವರಿಗೆ ಈತ ಅಕ್ಷರಶ: ಕಾಮಧೇನು ಕಲ್ಪವೃಕ್ಷ ಈ ಕಾಮಣ್ಣನಿಗೆ ಇಂಥ ಸಿದ್ಧಿ ಲಭಿಸಿದುದು ಒಬ್ಬ ತಪೋನರತ ಸಿದ್ಧ ಪುರುಷನ ಸಿದ್ಧ ಹಸ್ತದಿಂದ. ಎಲ್ಲೆಡೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಿರುವುದನ್ನು ಗಮನಿಸಿ ಈ ಮಹಿಮಾ ಪುರುಷ ಕಾಮಣ್ಣ ಕೇವಲ ಸಾಂಕೇತಿಕ ಮೂರ್ತಿಯಾಗದೇ ಆರಾಧಿಸುವವರಿಗೆ ಆರಾಧ್ಯ ದೈವವಾಗಬೆಕು ಎಂಬ ಅಪೇಕ್ಷೆಯಿಂದ ವಿಶಿಷ್ಟ ಮೂರ್ತಿ ರಚನೆಯ ಸಂಕಲ್ಪ.
ದಿನ ಕಳೆದಂತೆ ಹೋಳಿ ಕಾಮನಿಗೆ ರತಿಯ ವೇಷಭೂಷಣವು ಬದಲಾಗುತ್ತಿದೆ. ಕಾಮ ಮಾತ್ರ ತನ್ನ ವಿನ್ಯಾಸ ಬದಲಿಸಿಕೊಳ್ಳದೆ ಸಂಪ್ರದಾಯದಲ್ಲೇ ಉಳಿದುಕೊಂಡಿದ್ದಾನೆ. ರತಿ ಮಾತ್ರ ಆಧುನಿಕತೆಯನ್ನು ಮೈಗೂಡಿಸಿಕೊಂಡು ಕಾಣ ಸಿಗುತ್ತಿದ್ದಾಳೆ.
ಕಂಪ್ಲಿ ಪಟ್ಟಣದ ಕುರುಹಿನಶೆಟ್ಟಿ ಸಮಾಜದ ಬಾಂಧವರ ಶ್ರೀನೀಲಕಂಠೇಶ್ವರ ದೇವಸ್ಥಾನದಲ್ಲಿ ಕಾಮಣ್ಣ ಸಮಿತಿಯಿಂದ ವಿದೇಶಿ ಮಾದರಿ ಸ್ತ್ರೀ ವೇಷಧಾರಿ ರತಿಯೊಂದಿಗೆ ಪೌರಾಣಿಕ ದೇಶಿಯ ವೇಷಧಾರಿ ಕಾಮನ ಪ್ರತಿಮೆಯನ್ನು ಮಾರ್ಚ್ 11ರ ಮಂಗಳವಾರ ರಾತ್ರಿ ಪ್ರತಿಷ್ಠಾಪಿಸಿ ಅಲಂಕರಿಸಿದ್ದಾರೆ. ಫಾರಿನ್ ರತಿಯ ಪ್ರತಿಮೆ ಪಟ್ಟಣದಲ್ಲಿ ವೈರಲ್ ಆಗಿದ್ದು ನೋಡುಗರಲ್ಲಿ ನಗೆ ತರಿಸುತ್ತಿದೆ.
ಸಾಮಾನ್ಯವಾಗಿ ಪೌರಾಣಿಕ ಕಾಮನೊಂದಿಗೆ ಪೌರಾಣಿಕ ಹಿನ್ನಲೆಯ ರತಿದೇವಿಯನ್ನು ಪ್ರತಿಷ್ಠಾಪಿಸುವುದುಂಟು. ಆದರೆ, ಪಟ್ಟಣಿಗರ ಗಮನ ಸೆಳೆಯಲು ಕಳೆದ ವರ್ಷದಿಂದ ಕಾಮನೊಂದಿಗೆ ಫ್ರಾಕ್ ತೊಟ್ಟ, ಕೂದಲು ಇಳಿ ಬಿಟ್ಟು, ತಲೆಗೆ ಛತ್ರಿಯನ್ನು ಸಿಕ್ಕಿಸಿಕೊಂಡ ಆಧುನಿಕ ಶೈಲಿಯ ವಿದೇಶಿ ರತಿ ಪ್ರತಿಮೆ ಗಮನ ಸೆಳೆಯುತ್ತಿದೆ.
ವಿಶೇಷತೆ ಇರಲೆಂದು ಬೆಂಗಳೂರಿನಿಂದ ಮಾರ್ಡನ್ ಲೇಡಿ ಗೊಂಬೆ, ಡ್ರೆಸ್ ಖರೀದಿಸಿ ಪ್ರತಿಷ್ಠಾಪಿಸಿದೆ. ಶುಕ್ರವಾರ ರತಿಗೆ ಸಂಪ್ರದಾಯದ ಗುಳೇದಗುಡ್ಡ ಸೀರೆ ಉಡಿಸಲಾಗುವುದು. ವಿದೇಶಿಯರು ಭಾರತೀಯ ಸಂಪ್ರದಾಯದವನ್ನು ಮೆಚ್ಚಿ ಭಾರತೀಯತೆಯನ್ನು ಅಳವಡಿಸಿಕೊಳ್ಳುವ ಪ್ರತೀಕವಾಗಿ, ಮಾರ್ಡನ್ ಲೇಡಿಯನ್ನು ದೇಶಿಯ ರತಿಯಾಗಿ ಪರಿವರ್ತನೆಯಾಗುವ ಸಂದೇಶ ಸಾರುತ್ತದೆ ಎಂದು ನೀಲಕಂಠೇಶ್ವರ ಕಾಮಣ್ಣ ಸೇವಾ ಸಮಿತಿಯ ಸದಸ್ಯರಾದ ಜಿ.ಎಚ್. ಶಶಿಧರಗೌಡ, ಅಕ್ಕಸಾಲಿ ಗಿರಿರಾಜಾಚಾರ್, ಬೂದಗುಂಪಿ ಶಿವರಾಜ, ಎಲಿಗಾರ ವೆಂಕಟರೆಡ್ಡಿ, ಯು.ಎಂ.ವಿದ್ಯಾಶಂಕರ್, ಕೆ.ವಿ.ಸಂದೀಪ್ ಇನ್ನಿತರರ ಅಭಿಪ್ರಾಯವಾಗಿದೆ.
ಈ ವರ್ಷ ಮಾ. 14ರ ಹೋಳಿ ಹುಣ್ಣಿಮೆಯಂದು ಸಂಜೆ ಕಾಮನ ಹಾಡನ್ನು ಹಾಡುತ್ತಾ ಕಾಮನಪಟ ಮೆರವಣಿಗೆ ನಡೆಸಲಾಗುವುದು. ನಂತರ ಮಧ್ಯರಾತ್ರಿ ಕಾಮ ಮತ್ತು ರತಿಯರ ಚಿತ್ರಪಟವನ್ನು ದಹಿಸಲಾಗುತ್ತದೆ. ಕಾಮ ಪ್ರತಿಷ್ಠಾಪಿಸಿದ ಆವರಣದಲ್ಲಿ ಮಾ. 15ರಂದು ಹೋಳಿ ಬಣ್ಣದಾಟ ಜರುಗಲಿದೆ.
ಅಣಕು ಶವ ಮಾಡಿ ಊರ ತುಂಬಾ ಪ್ರದರ್ಶಿಸಿ ಕಟ್ಟಿಗೆ, ಕುಳ್ಳು, ಕಾಸು ಸಂಪಾದಿಸುತ್ತಿದ್ದರು. ಹೊಯ್ಕೊಳ್ಳೋದು ಕಾಮನ ಹಬ್ಬದ ವಿಶೇಷ ಆಗಿತ್ತು. ಹಲಗೆ ಬಾರಿಸದಿದ್ದರೆ ಹೋಳಿ ಹಬ್ಬ ಅನಿಸುವುದೇ ಇಲ್ಲ. ಹೋಳಿ ಹುಣ್ಣಿಮೆ ಆಸುಪಾಸಿನಲ್ಲಿ ಯಾವ ಶುಭ ಕಾರ್ಯ ಮಾಡುತ್ತಿರಲಿಲ್ಲ.
ಕಾಮ ಇಟ್ಟವರು ಸೌಹಾರ್ಧತೆಯ ಪ್ರತೀಕವಾಗಿ ಹೋಳಿ ಗೀತೆ ಹಾಡುತ್ತಾ ಬೇರೆಡೆ ಸ್ಥಾಪಿಸಿದ್ದ ಕಾಮರತಿಯನ್ನು ಭೇಟಿ ಮಾಡುತ್ತಿದ್ದರು. ಮಧ್ಯರಾತ್ರಿ ಕಾಮದಹನ ಆಗುತ್ತಿತ್ತು. ಬೆಳಿಗ್ಗೆ ಅದರ ಕೆಂಡದಲ್ಲಿ ಈರುಳ್ಳಿ (ಉಳ್ಳಾಗಡ್ಡೆ) ಸುಡುವುದು ಮೋಜೆನಿಸುತ್ತಿತ್ತು. ಮರುದಿನ ಹೋಳಿ ಬಣ್ಣದಾಟ, ಅಂದು ಮಧ್ಯಾಹ್ನ ಕಾಮನ ಪೆಟ್ಟಿಗೆ ಹೊತ್ತು ಮೆರವಣಿಗೆ ಮಾಡುವಾಗ ಬಣ್ಣದಾಟ ನಡೆಯುತ್ತಿತ್ತು. ಬಣ್ಣದಾಟ ಆಡಿದವರ ರೂಪ ಕಾಣುವುದೇ ನಗೆ ತರಿಸುತ್ತಿತ್ತು. ಸ್ನಾನಕ್ಕೆ ಹೊಳೆ ಕಾಲುವೆಗೆ ತೆರಳಿ ಬಂದು ಕಾಮ ಸುಟ್ಟ ಸ್ಥಳದಲ್ಲಿ ದೀಪ ಹಚ್ಚಿಡುವ ಸಂಪ್ರದಾಯ ಇತ್ತು. ಸೀಮೆ ಎಣ್ಣೆ ಹಾಕಿ ತೊಳೆದುಕೊಂಡರೂ ಸರಿಯಾಗಿ ಹೋಗದ ಬಣ್ಣ, ಹೋಳಿ ಬಣ್ಣದ ಆಟದ ಗುರುತಾಗಿರುತ್ತಿತ್ತು.
ಇದೀಗ ಕಾಮನ ಹಬ್ಬ ಬದಲಾಗಿದೆ. ಕಾಮನ ಬದಲಾಗದಿದ್ದರೂ ರತಿ ನೋಡುಗರಿಗೆ ಮುದ ಕೊಡುವಂತೆ ದೇಸಿ ಬಣ್ಣಕ್ಕಿಂತ ರಾಸಾಯನಿಕ ಬಣ್ಣದ ಹಾವಳಿ ಹೆಚ್ಚಿದೆ. ಮಕ್ಕಳು ಮನಸ್ಪೂರ್ತಿಯಾಗಿ ಆಡಲು, ಹಾಡಲು ಶಾಲೆ, ಕಾಲೇಜು ಪರೀಕ್ಷೆಗಳ ಸವಾಲು ಆಗಿವೆ. ಆಗಿನಂತೆ ಕಾಮನ ಹಾಡು ಹಾಡುವವರಿಗೆ ಬರ. ಓಣಿಗೊಂದು ಪಕ್ಷ, ನಾಯಕ, ಅಹಂ, ಬಿಂಕ ಮತ್ತೇ ಕಂಡರಾಗದ ಸೊಟ್ಟ ಮೊರೆಯಿಂದಾಗಿ ಹೋಳಿ ಬಣ್ಣ ಬಿಳಿಚಿಗೊಂಡಿದೆ. ಸೌಹಾರ್ಧತೆಯ ಕಾಮನ ಮೆರವಣಿಗೆ ಮಾಯವಾಗಿದೆ. ಹೋಳಿ ಹಬ್ಬ ಇದೆ ಅಂದರೆ ಇದೆ ಅಷ್ಟೇ ಎನ್ನುವಂತಾಗಿದೆ ನಾವೀನ್ಯ ರೂಪ ಪಡೆದುಕೊಂಡಿದೆ.
ಹೋಳಿ ಹಬ್ಬದ ಮನವಿ
ಕರ್ನಾಟಕ ರಕ್ಷಣಾ ವೇದಿಕೆಯ ವಿದ್ಯಾರ್ಥಿ ತಾಲೂಕು ಘಟಕದ ಅಧ್ಯಕ್ಷರಾದ ಎಮ್ ಶಾಷವಲಿ (ಮುನ್ನ) ಯುವಕರಲ್ಲಿ ಮನವಿ ಕೊಂಡಿದ್ದಾರೆ, ಅದೇನೆಂದರೆ
ಇತ್ತೀಚಿನ ದಿನಗಳ ಹಿಂದೆ ಕಾಣುತ್ತಿರುವುದೇನೆಂದರೆ ನಮ್ಮ ಕಂಪ್ಲಿ ಕೋಟೆಯ ತುಂಗಭದ್ರಾ ನದಿಯಲ್ಲಿ ಹೋಳಿ ಹಬ್ಬ ಆಚರಿಸಿ ಸ್ನಾನ ಮಾಡಲು ಹೋಗುವ ಯುವಕರು ಜಾಗೃತಿ ವಹಿಸಬೇಕು ಏಕೆಂದರೆ ಮೊಸಳೆಗಳು ಮತ್ತು ನೀರು ನಾಯಿಗಳು ಅತಿ ಹೆಚ್ಚು ಕಂಡು ಬರುತ್ತಿರುವುದರಿಂದ ಹಾಗೂ ಮರಳಿನ ಕುಣಿಗಳು ಸಾಕಷ್ಟಿರುವುದರಿಂದ ಹೊಳೆಯಲ್ಲಿ ಸ್ನಾನ ಮಾಡಲು ಅನೇಕ ಚಿಕ್ಕ ಮಕ್ಕಳು, ಯುವಕರು ಸ್ನಾನ ಮಾಡಲು ತೆರುಳುತ್ತಾರೆ ಇದರಿಂದ ಅವರಿಗೆ ಅಪಾಯವಾಗದಂತೆ ಇದಕ್ಕೆ ಸಂಬಂಧಪಟ್ಟಂತ ಅಧಿಕಾರಿಗಳು ಆದಷ್ಟು ಬೇಗನೆ ಜಾಗೃತಿ ಮೂಡಿಸಬೇಕೆಂದು ತಮ್ಮಲ್ಲಿ ನಮ್ಮ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿರುತ್ತಾರೆ.
ಕಳೆದ ವರ್ಷಗಳಲ್ಲಿ ಹೋಳಿ ಹಬ್ಬದಂದು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಅನೇಕ ಯುವಕರು ಸಾವನ್ನಪ್ಪಿದ್ದಾರೆ. ಅದಕ್ಕೋಸ್ಕರ ಜಾಗ್ರತೆಯಿಂದ ಇರಿ ಹಬ್ಬ ನಿಮ್ಮ ಜೀವನಕ್ಕೆ ಹಸಿರಾಗಲಿ ನಿಮ್ಮ ಉಸಿರನ್ನು ಬಿಗಿಯುವಷ್ಟು ಬೇಡ ಎಂಬುದು ನಮ್ಮ ಕರುನಾಡ ಕಂದ ಪತ್ರಿಕೆಯ ಕಾಳಜಿ.
ವರದಿ : ಜಿಲಾನ್ ಸಾಬ್ ಬಡಿಗೇರ್.