ಬಳ್ಳಾರಿ / ಕಂಪ್ಲಿ : ಸ್ಥಳೀಯ ಮಹಾತ್ಮಗಾಂಧಿ ವೃತ್ತದಲ್ಲಿರುವ ಆಟೋ ನಿಲ್ದಾಣ ಬಳಿಯಲ್ಲಿ ದಿ. ಡಾ.ಪುನೀತ್ ರಾಜಕುಮಾರ ಅವರ 50ನೇ ವರ್ಷದ ಜನ್ಮದಿನದ ಅಂಗವಾಗಿ ಪುನೀತ್ ರಾಜಕುಮಾರ ಅಭಿಮಾನಿ ಬಳಗದಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ಸೋಮವಾರ ವಿತರಿಸಲಾಯಿತು.
ಅಭಿಮಾನಿ ಪೇಂಟರ್ ಉಪ್ಪಿರಾಜ ಮಾತನಾಡಿ, ಸಮಾಜಕ್ಕಾಗಿ ಸಲ್ಲಿಸಿದ ಸೇವೆ, ಸಂಕಷ್ಟದಲ್ಲಿದ್ದವರಿಗೆ ತಾವು ಮಾಡಿದ ಸಹಾಯವನ್ನು ಯಾರೊಬ್ಬರ ಬಳಿಯೂ ಹೇಳಿಕೊಳ್ಳದ ಮೇರು ವ್ಯಕ್ತಿತ್ವ ಪುನೀತ್, ರಾಜ್‌ಕುಮಾರ್ ಅವರದ್ದಾಗಿತ್ತು’. ಪುನೀತ್ ನಾಡಿನ ಶಕ್ತಿ. ಮಾನವೀಯತೆಯ ಗುಣಗಳನ್ನು ಹೊಂದಿದ್ದ ಮಹಾನ್ ಚೇತನ. ಚಿಕ್ಕವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದವರು, ಚಿತ್ರರಂಗ ಹಾಗೂ ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರಿಲ್ಲದ ಕರುನಾಡು ಬಡವಾಗಿದೆ’. ವೃದ್ಧಾಶ್ರಮ, ಅನಾಥಾಲಯ, ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿ ಜನ ಸೇವೆಯನ್ನು ಸದ್ದಿಲ್ಲದೆ ಮಾಡಿದ ಪುನೀತ್ ಸಾವಿನ ನೋವಿನ ಛಾಯೆಯಿಂದ ಹೊರ ಬರಲಾಗುತ್ತಿಲ್ಲ. ಪುನೀತ್ ಅವರ ಸೇವೆ ಅನನ್ಯವಾಗಿದೆ. ಅವರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡೋಣ ಎಂದರು.
ಈ ಸಂದರ್ಭದಲ್ಲಿ ಅಭಿಮಾನಿಗಳಾದ ಸಿಂಹಾದ್ರಿ, ಆಕಾಶ, ಮಸ್ತಾನ್, ವಿ.ವೆಂಕಟೇಶ, ಹೊನ್ನೂರಸ್ವಾಮಿ, ಅಶೋಕ, ರಮೇಶ, ಕೆ.ರಿಯಾನ್, ಕೆ.ಮಹಾಭಾಷಾ, ದಾದು, ಕುಮಾರ, ನಾಗರಾಜ ಸೇರಿದಂತೆ ಮಕ್ಕಳು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್