ಕಲಬುರಗಿ/ ಚಿತ್ತಾಪುರ: ಅಕ್ಷರಗಳ ಹಾಗೂ ಪದಗಳ ಮೇಲೆ ಹಿಡಿತ ಸಾಧಿಸಿದ್ದ ನಾಡು ಕಂಡ ದಿಟ್ಟ ಪತ್ರಕರ್ತ ದಿ.ರವಿ ಬೆಳಗೆರೆ ಅವರು ಪತ್ರಿಕಾ ರಂಗಕ್ಕೆ ಆದರ್ಶ ಪತ್ರಕರ್ತರಾಗಿದ್ದಾರೆ ಎಂದು ಪುರಸಭೆ ಸದಸ್ಯ ವಿನೋದ ಗುತ್ತೇದಾರ ಹೇಳಿದರು
ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ರವಿ ಬೆಳಗೆರೆ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅಕ್ಷರ ಮಾಂತ್ರಿಕ ಖ್ಯಾತ ಪತ್ರಕರ್ತ ದಿ. ರವಿ ಬೆಳಗೆರೆ ಅವರ ಜನ್ಮದಿನದ ನಿಮಿತ್ತ ಕಸವಿಲೇವಾರಿ ಮಾಡುವ ಪುರಸಭೆ ವಾಹನಗಳ ಚಾಲಕರಿಗೆ ಮತ್ತು ನಳ ಬಿಡುವ ಕಾರ್ಮಿಕರಿಗೆ ಗೌರವ ಸನ್ಮಾನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಕೇಕ್ ಕತ್ತರಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ನೂರಾರು ಪತ್ರಕರ್ತರಿಗೆ ಸ್ಪೂರ್ತಿಯಾದ ರವಿ ಬೆಳಗೆರೆ ಅವರು ತಮ್ಮ ಹಾಯ್ ಬೆಂಗಳೂರು ಪತ್ರಿಕೆ ಮೂಲಕ ರಾಜ್ಯದ ಜನರ ಮನೆಮಾತಾಗಿದ್ದಾರೆ, ಇಂತಹ ಪ್ರಬುದ್ಧ ಮಹಾನ್ ಪತ್ರಕರ್ತ ರವಿ ಬೆಳಗೆರೆ ಅವರ ಜನ್ಮ ದಿನದ ಸಮಾರಂಭ ಪ್ರತಿ ವರ್ಷ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿರುವ ಅಭಿಮಾನಿ ರವಿ ಇವಣಿ ಅವರ ಅಭಿಮಾನ ಮೆಚ್ಚುವಂಥದ್ದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಶರಣಪ್ಪ ನಾಟೀಕಾರ ಮಾತನಾಡಿ, ದಿಟ್ಟತನಕ್ಕೆ ಹಾಗೂ ಇದ್ದದ್ದು ಇದ್ದ ಹಾಗೆ ಬರೆಯುವ ಎದೆಗಾರಿಕೆ ಇರುವ ಏಕೈಕ ಪತ್ರಕರ್ತ ರವಿ ಬೆಳಗೆರೆ ಆಗಿದ್ದರು ಎಂದು ಸ್ಮರಿಸಿದರು.
ಅಭಿಮಾನಿ ರವಿ ಇವಣಿ ಮಾತನಾಡಿ, ನಾನು ಮೊದಲಿನಿಂದಲೂ ಹಾಯ್ ಬೆಂಗಳೂರ್ ಪತ್ರಿಕೆಯನ್ನು ಓದುವ ಮೂಲಕ ರವಿ ಬೆಳಗೆರೆ ಅವರ ಅಭಿಮಾನಿಯಾದೆ, ಅವರು ನನಗೆ ಸ್ಪೂರ್ತಿ ಹಾಗೂ ಶಕ್ತಿಯಾಗಿದ್ದರು. ಅವರು ಜೀವಂತವಾಗಿ ಇದ್ದಾಗಲೂ ಈಗಲೂ ಅವರ ಜನ್ಮ ದಿನಾಚರಣೆ ಹಾಗೂ ಪುಣ್ಯ ಸ್ಮರಣೆ ನಿಮಿತ್ತ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಗೆಳೆಯರ ಸಹಕಾರ ಮತ್ತು ಮಾರ್ಗದರ್ಶನದ ಮೇರೆಗೆ ತಪ್ಪದೇ ಮಾಡುತ್ತಿದ್ದೇನೆ ಇದು ನನಗೆ ಬಹಳ ಆತ್ಮತೃಪ್ತಿ ನೀಡುತ್ತದೆ ಎಂದು ಹೇಳಿದರು.
ಪ್ರವೀಣ್ ಹಿಟ್ಟಿನ್ ಮಾತನಾಡಿ, ರವಿ ಬೆಳಗೆರೆ ಅವರ ಸಾಹಿತ್ಯ ಎಲ್ಲರಿಗೂ ಅಚ್ಚುಮೆಚ್ಚು ಅದರಲ್ಲೂ ಹಾಯ್ ಬೆಂಗಳೂರ್ ಪತ್ರಿಕೆಯಂತೂ ಎಲ್ಲರ ಮನೆಮಾತಾಗಿದೆ, ಹಾಯ್ ಬೆಂಗಳೂರ್ ಪತ್ರಿಕೆಯನ್ನು ಓದಲು ಓದುಗರು ಕಾತುರರಾಗಿರುತ್ತಿದ್ದರು ಅಷ್ಟರ ಮಟ್ಟಿಗೆ ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿತ್ತು ಎಂದು ಸ್ಮರಿಸಿದರು.
ಪತ್ರಕರ್ತರಾದ ರವಿಶಂಕರ್ ಬುರ್ಲಿ, ಎಂ.ಡಿ.ಮಶಾಕ್, ಮುಖಂಡರಾದ ನಾಗು ಕಲ್ಲಕ್, ಶಾಮ್ ಮುಕ್ತೇದಾರ, ಬಾಬು ಕಾಶಿ, ಸಂತೋಷ ಕಲಾಲ್, ಸುರೇಶ್ ಬೆನಕನಳ್ಳಿ, ರವಿ ಗೊಬ್ಬರ, ಸಲೀಂ ತರಕಾರಿ, ಬಸವರಾಜ ಹೂಗಾರ, ಮಲ್ಲಿಕಾರ್ಜುನ ಮುಗುಳಕರ್, ಪ್ರಭು ಅರಿಕೇರಿ, ಕಲ್ಲಪ್ಪ ತೊಟ್ನಳ್ಳಿ ಸೇರಿದಂತೆ ಇತರರು ಇದ್ದರು.
ಪತ್ರಕರ್ತ ಕಾಶಿನಾಥ ಗುತ್ತೇದಾರ ನಿರೂಪಿಸಿ, ವಂದಿಸಿದರು.
ವರದಿ ಮೊಹಮ್ಮದ್ ಅಲಿ, ಚಿತ್ತಾಪುರ