ಉತ್ತರ ಕನ್ನಡ/ ಮುಂಡಗೋಡ : ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷಮೆಂಟ್ (KPME) ಅಡಿಯಲ್ಲಿ ಲೈಸೆನ್ಸ್ ಪಡೆಯದೆ ಮುಂಡಗೋಡ ನಗರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಡಾ. ಕಿರಣ್ ಮಕ್ಕಳ ಚಿಕಿತ್ಸಾಲಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬೀಗ ಹಾಕಿ ಬಂದ್ ಮಾಡಿಸಲಾಗಿದೆ.
ಕ್ಲಿನಿಕ್ ನಲ್ಲಿಯೇ ವೈದ್ಯರಿಗೆ ಸ್ಥಳದಲ್ಲಿಯೇ ನೋಟಿಸ್ ನೀಡಿ, ಸೂಕ್ತ ಹಾಗೂ ಅಗತ್ಯ ದಾಖಲೆಗಳನ್ನು ಪಡೆದ ನಂತರವೇ ಕ್ಲಿನಿಕ್ ಆರoಭಿಸಬೇಕು ಎಂದು ಕ್ಲಿನಿಕ್ ಮಾಲೀಕರಿಗೆ ತಾಲೂಕ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ದಿಢೀರ್ ಕಾರ್ಯಾಚರಣೆ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ್ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷಮೆಂಟ್ (KPME) ಅಡಿಯಲ್ಲಿ ನೊಂದಣಿ ಆಗದೆ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಕ್ಲಿನಿಕ್ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಿಢೀರ್ ಕಾರ್ಯಾಚರಣೆ ಕೈಗೊಂಡಿದ್ದು ಕೆಪಿಎಂಇ ನೊಂದಣಿ ಆದಾಗ ಮಾತ್ರ ಕ್ಲಿನಿಕ್ ಗಳು ಕಾರ್ಯ ನಿರ್ವಹಿಸಬೇಕು ಎಂದು ಮಾಹಿತಿ ನೀಡಿದರು. ಇದೇ ರೀತಿ ಗ್ರಾಮೀಣ ಭಾಗದಲ್ಲಿ ಕೆಪಿಎಂಇ ನೊಂದಣಿ ಇಲ್ಲದೆ ಸಾಕಷ್ಟು ಕ್ಲಿನಿಕ್ ಗಳಿದ್ದು ಅವುಗಳ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಅಶ್ವಿನಿ ಬೋರ್ಕರ್ (ಪ್ರಭಾರ) ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು, ಸಂಜೀವ ಗಲಗಲಿ ಆಯುಷ ವೈದ್ಯಾಧಿಕಾರಿಗಳು. ಡಾ. ಸ್ವರೂಪರಾಣಿ ಪಾಟೀಲ್ ತಾಲೂಕ ಆಸ್ಪತ್ರೆ ವೈದ್ಯಾಧಿಕಾರಿಗಳು, ಭರತ್ ಡಿ.ಟಿ ವೈದ್ಯರು ಹಾಗೂ ಮುಂಡಗೋಡ ಪೊಲೀಸರು ಕಾರ್ಯಾಚರಣೆ ತಂಡದಲ್ಲಿ ಪಾಲ್ಗೊಂಡಿದ್ದರು.
ಇದೇ ರೀತಿ ನಗರದ ಪಾಂಡುರಂಗ ಲಾಡ್ಜ್ ಬಳಿ ಇರುವ ಮತ್ತೊಂದು ಕ್ಲಿನಿಕ್ ಮೇಲೆ ಅಧಿಕಾರಿಗಳು ದಾಳಿ ಮಾಡುವ ಮುನ್ನವೇ ಕ್ಲಿನಿಕ್ ಗೆ ಬೀಗ ಹಾಕಲಾಗಿತ್ತು.
- ಕರುನಾಡ ಕಂದ
