
ಜ್ಞಾನವೇ ಜಗತ್ತನ್ನು ಆಳುತ್ತದೆ: ವೀರೇಶ ಗೋನವಾರ
ರಾಯಚೂರು/ ಸಿಂಧನೂರು :
ಜ್ಞಾನದಿಂದ ಮಾತ್ರ ವಿದ್ಯಾರ್ಥಿ-ಯುವಕರು ತಮ್ಮ ಜೀವನದಲ್ಲಿ ಮುಂದೆ ಬರಬಹುದು, ಜ್ಞಾನವೇ ಜಗತ್ತನ್ನು ಆಳುತ್ತದೆ ಎಂದು ಇಂಗ್ಲೀಷ್ ಭಾಷಾ ಶಿಕ್ಷಕ ವೀರೇಶ ಗೋನವಾರ ಹೇಳಿದರು.
ಅವರು ನಗರದ ಬಿಸಿಎಂ ಇಲಾಖೆಯ ದೇವರಾಜ್ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತ, ನಿಮ್ಮ ಬಗ್ಗೆ ತಂದೆ ತಾಯಿಗಳು ಹಾಗೂ ಗುರುಗಳು ಇಟ್ಟಿರುವ ಭರವಸೆಯನ್ನು ಕಳೆದುಕೊಳ್ಳದೇ ಉತ್ತಮ ಫಲಿತಾಂಶವನ್ನು ಪಡೆಯುವ ಮೂಲಕ ಅವರಿಗೆ ಕೀರ್ತಿ ತರಬೇಕು. ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು, ಜೀವನದಲ್ಲಿ ಉತ್ತಮ ಜ್ಞಾನದ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಸತಿ ನಿಲಯದ ವಾರ್ಡನ್ ಬಾಬು ಹಸಮಕಲ್ ಮಾತನಾಡಿ, ಸರ್ಕಾರಗಳು ನೀಡುವ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಜೀವನವನ್ನು ನಿಮ್ಮದಾಗಿಸಿಕೊಳ್ಳಬೇಕು. ವಿದ್ಯಾರ್ಥಿಯ ಜೀವನ ಬಂಗಾರದಂತಹ ಜೀವನ ಇದನ್ನು ತಾವು ಅರ್ಥ ಮಾಡಿಕೊಂಡು ವಿದ್ಯಾಭ್ಯಾಸವನ್ನು ಮಾಡಿ ಮುಂದೆ ಬರಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಾದ ಚಿರಂಜೀವಿ, ಮಹೇಶ, ನವೀನ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆ ಮೇಲೆ ಮೆಟ್ರಿಕ್ ನಂತರದ ವಸತಿ ನಿಲಯದ ವಾರ್ಡನ್ ಲೋಕೇಶ್ ರಾಥೋಡ್, ಸಿಬ್ಬಂದಿಗಳಾದ ಗೋಪಿ, ಇಮಾಮ್ ಹುಸೇನ್ ಎತ್ಮಾರಿ, ವಿಜಯಕುಮಾರ್ , ಅಬ್ದುಲ್ ಸಿರಾಜ್, ದ್ಯಾಮಣ್ಣ, ಶಿವಲಿಂಗ ಕೊಡ್ಲಿ ಸೇರಿದಂತೆ ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ
