ಕಲಬುರಗಿ/ ಚಿತ್ತಾಪುರ: ಹಿರಿಯ ನಾಗರಿಕರಿಗೆ ಹಾಗೂ ನಾಗರಿಕಿಯರಿಗೆ 60 ವರ್ಷ ಮೇಲ್ಪಟ್ಟವರಿಗೆ ಪಡಿತರ ಚೀಟಿ ಕಾರ್ಡಗಾಗಿ ಇ-ಶ್ರಮ ಕಾರ್ಡ್ ಇರದೆ ಇರುವವರಿಗೆ ಯಾವುದಾದರೊಂದು ವ್ಯವಸ್ಥೆ ಕಲ್ಪಿಸಬೇಕು. ಅದರಂತೆ ರೈಲ್ವೆಗಳಲ್ಲಿ ಪ್ರಯಾಣಿಸಲು ಶೇ. 50 ಪ್ರತಿಶತದಷ್ಟು ರಿಯಾಯ್ತಿ ದರದಲ್ಲಿ ಪಾಸ್ ಮುಂದುವರೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿ ಹೊಂಗೀರಣ ತಾಲೂಕು ಹಿರಿಯ ನಾಗರಿಕ, ನಾಗರಿಕಿಯರ ಹಾಗೂ ವಯೋವೃದ್ಧರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಹಿರಿಯ ನಾಗರಿಕರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ನಂತರ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೇ ರೀತಿಯ ಹೆಬ್ಬಟ್ಟಿನ ಸಹಿ ಬರುತ್ತಿಲ್ಲ ಮೇಲಾಗಿ ಸದರಿ ಪಡಿತರ ಚೀಟಿ ಪಡೆಯಲು ಸರ್ಕಾರ ಇ-ಶ್ರಮ ಕಾರ್ಡ್ ಇದ್ದವರಿಗೆ ಮಾತ್ರ ಪಡಿತರ ಚೀಟಿ ನೀಡಲಾಗುವುದೆಂದು ಸರ್ಕಾರ ಆದೇಶ ಹೊರಡಿಸಲಾಗಿದೆ. ಆದರೆ 60 ವರ್ಷ ಮೇಲ್ಪಟ್ಟವರಿಗೆ ಇ-ಶ್ರಮ ಕಾರ್ಡ್ ಆಗುವುದಿಲ್ಲ ಅವರಿಗೆ ಯಾವುದೇ ತರಹದ ಸೌಲಭ್ಯ ಪಡೆದುಕೊಳ್ಳಲು ಬಹಳ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಈ ಕುರಿತು ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಸುಸುತ್ರವಾಗಿ ಹಾಗೂ ಮನೆ ಮನೆ ಬಾಗಿಲಿಗೆ ಕಲ್ಪಿಸುವ ಸೌಲಭ್ಯ ಒದಗಿಸಿಕೊಡುತ್ತೇನೆಂದು ಹೇಳುತ್ತಾ ಬಂದರೂ ಸಹಿತ ಯಾವುದೇ ಒಬ್ಬ ಕಡು ಬಡವ ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತಿಲ್ಲ. ಮೇಲಾಗಿ ಲಾಕ್ ಡೌನ್ ಮೊದಲು ಹಿರಿಯ ನಾಗರಿಕರಿಗೆ ಶೇ.50 ರಿಯಾಯ್ತಿ ದರದಲ್ಲಿ ಪಾಸ್ ವಿತರಣೆ ಮಾಡಲಾಗುತ್ತಿತ್ತು. ಆದರೆ ಲಾಕ್ ಡೌನ್ ನಂತರ ಹಿರಿಯ ನಾಗರಿಕರಿಗೆ ಇರುವ ರಿಯಾಯ್ತಿ ದರದ ಪಾಸ್ ರದ್ದುಪಡಿಸಲಾಗಿರುತ್ತದೆ. ಇದರಿಂದ 60 ವರ್ಷ ಮೇಲ್ಪಟ್ಟ ಯಾವುದೇ ಒಂದು ಸರ್ಕಾರಿ ಸೌಲಭ್ಯಗಳಾದ ಮಾಶಾಸನ, ಆಹಾರ ಧಾನ್ಯ, ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನಾನುಕೂಲವಾಗುತ್ತಿದೆ. ಹೀಗಾಗಿ ಕೂಡಲೇ ಇ-ಶ್ರಮ ಕಾರ್ಡ ಇಲ್ಲದೆ 60 ವರ್ಷ ಮೇಲ್ಪಟ್ಟ ಕಡುಬಡವರ ಹಿರಿಯ ನಾಗರಿಕ ಮತ್ತು ನಾಗರಿಕರಿಗೆ ತಕ್ಷಣವೇ ಪಡಿತರ ಚೀಟಿ ಹಾಗೂ ರೈಲ್ವೆ ಪಾಸ್ ರಿಯಾಯ್ತಿ ದರದಲ್ಲಿ ನೀಡುವ ಕುರಿತು ಆದಷ್ಟು ಬೇಗನೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ನಾಗರಿಕರಾದ ಮಲ್ಲಿನಾಥ ಪಾಟೀಲ, ರವೀಂದ್ರ ತೇಲ್ಕರ್, ಅಬ್ದುಲ್ ಖಾದರ್, ನರಹರಿ ಕುಲಕರ್ಣಿ, ರಮೇಶ್ ಕಟ್ಟಿಮನಿ, ಚಂದು ಮೆಂಗಜಿ, ರಾಜಣ್ಣ ಪೀರಪ್ಪ, ಬಾಬು ಹೇರೂರು, ದಶರಥ ವಟಿವಟಿ, ಅಂಬಾದಾಸ ಬಸೂದೆ, ಮಿರಾಜೋದ್ದಿನ್ ಪಟೇಲ್ ಇತರರು ಇದ್ದರು.
ವರದಿ ಮೊಹಮ್ಮದ್ ಅಲಿ, ಚಿತ್ತಾಪುರ
