ಬಳ್ಳಾರಿ / ಕಂಪ್ಲಿ : ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ (ರಿ.) ವತಿಯಿಂದ ರಾಜ್ಯದ ಕೃಷಿ ಸಚಿವರಾದ ಮಾನ್ಯ ಎನ್. ಚಲುವರಾಯಸ್ವಾಮಿ ಯವರನ್ನು ಭೇಟಿಯಾಗಿ ರಾಜ್ಯದಲ್ಲಿ ಭತ್ತ ಹಾಗೂ ಜೋಳ ಖರೀದಿ ಕೇಂದ್ರ ತೆರೆಯುವಂತೆ ಹಾಗೂ ಭತ್ತ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಕುರಿತು ಬೆಂಗಳೂರಿನಲ್ಲಿ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕದಲ್ಲಿ ಭತ್ತ ಹಾಗೂ ಜೋಳದ ಕೇಂದ್ರ ಇನ್ನೂ ಕೆಲವು ಕಡೆ ಆರಂಭವಾಗಿಲ್ಲ ಹಾಗಾಗಿ ಎಲ್ಲಾ ಕಡೆಯೂ ಭತ್ತ ಹಾಗೂ ಜೋಳದ ಕೇಂದ್ರವನ್ನು ಪ್ರಾರಂಭಿಸಿ ರೈತರಿಗೆ ನೆರವಾಗಬೇಕು ಹಾಗೂ ಕರ್ನಾಟಕದಲ್ಲಿ ಭತ್ತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕು. ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಕರ್ನಾಟಕದ ಇತರೆ ಕಡೆ ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವುದು ಅವೈಜ್ಞಾನಿಕವಾಗಿದೆ. ಭತ್ತ ಖರೀದಿ ಕೇಂದ್ರ ಭತ್ತ ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಬೇಕು ಆದರೆ ಇತ್ತ ಕಟಾವು ಮಾಡಿದ ಎಲ್ಲಾ ರೈತರು ಮಧ್ಯವರ್ತಿಗಳ ಮುಖಾಂತರ ಭತ್ತ ಮಾರಿದ ನಂತರ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ತೆರೆಯುತ್ತಾರೆ. ಆದ್ದರಿಂದ ತಾವುಗಳು ಗಮನಿಸಬೇಕಾದ ಅಂಶವೇನೆಂದರೆ, ಉತ್ತರ ಕರ್ನಾಟಕದಲ್ಲಿ ಸುಮಾರು 47 ಲಕ್ಷ ಟನ್, ದಕ್ಷಿಣ ಕರ್ನಾಟಕದಲ್ಲಿ 42 ಲಕ್ಷ ಟನ್, ಭತ್ತ ಬೆಳೆಯುತ್ತಾರೆ ಹೀಗಾಗಿ 2025 ಏಪ್ರಿಲ್ ಕೊನೆಯವಾರ ಭತ್ತ ಕಟಾವುಗೆ ಬರುತ್ತದೆ. ತಾವುಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಅಧ್ಯಕ್ಷ ಬಿ. ಗಂಗಾಧರ ಮಾತನಾಡಿ ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಇನ್ನಿತರ ಜಿಲ್ಲೆಗಳಲ್ಲಿ ರೈತರ ಭತ್ತದ ಖರೀದಿ ಕೇಂದ್ರವನ್ನು ತೆರೆಯುವಂತೆ ಮಾನ್ಯ ಸಚಿವರನ್ನು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಕೃಷಿ ಸಚಿವರು ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷರಾದ ಖಾದರ್ ಭಾಷಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಡೆಲ್ಲಿ ಭೀಮಪ್ಪ, ರಾಜ್ಯ ಕಾರ್ಯದರ್ಶಿ ಆನೆಗೊಂದಿ ಬಸವರಾಜ, ವಿಜಯನಗರ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರಾದ ರತ್ನಮ್ಮ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
