ಕಲಬುರಗಿ / ಚಿತ್ತಾಪುರ : ಅಂಗನವಾಡಿ ಕೇಂದ್ರಗಳಲ್ಲಿ ನೀಡುತ್ತಿರುವ ಕಳಪೆ ಆಹಾರದಿಂದಲೇ ಬಾಣಂತಿಯರು ಸಾಯುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಚಂದ್ರಶೇಖರ ಕಾಶಿ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಪ್ರತಿಯೊಂದು ವಾರ್ಡ್ ಗಳಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿಯರಿಗೆ ಗುಣಮಟ್ಟದ ಆಹಾರ ಪದಾರ್ಥಗಳು ಪೊರೈಕೆಯಾಗುತ್ತಿದೆಯಾ ಅಥವಾ ಇಲ್ಲ ಎನ್ನುವುದು ತಾವು ಭೇಟಿ ನೀಡಿ ಪರಿಶೀಲನೆ ಮಾಡಿದ್ದೀರಾ ಎಂದು ಪ್ರಶ್ನಿಸಿದಾಗ, ಸಿಡಿಪಿಓ ಆರತಿ ತುಪ್ಪದ ಮಾತನಾಡಿ, ನಾವು ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರವೇ ಪೂರೈಕೆ ಮಾಡುತ್ತಿದ್ದೇವೆ, ನಾವು ನೀಡುತ್ತೀರುವ ಆಹಾರದಿಂದಲೇ ಬಾಣಂತಿಯರು ಸಾಯುತ್ತಿದ್ದಾರೆ ಎಂದು ಹೇಳಬೇಡಿ ಎಂದರು.
ಸದಸ್ಯರಾದ ಶೀಲಾ ಕಾಶಿ, ಚಂದ್ರಶೇಖರ ಕಾಶಿ, ಪಾಶಾ ಖುರೇಶಿ ಮಾತನಾಡಿ, ಮಹಿಳಾ ದಿನಾಚರಣೆಯ ಅರ್ಥ ಏನು? ನೀವು ಕೂಡಾ ಮಹಿಳೆ ಇದ್ದೀರಿ ಮಹಿಳಾ ದಿನಾಚರಣೆ ದಿನದಂದು ಮಹಿಳೆಯರಿಗೆ ಗೌರವ ಕೊಡುವುದು ನಿಮ್ಮ ಕರ್ತವ್ಯ ಎಂದಾಗ ಸಿಡಿಪಿಓ ಮಾತನಾಡಿ, ನನ್ನ ಕಡೆಯಿಂದ ತಪ್ಪಾಗಿದೆ, ಕ್ಷಮಿಸಿ ಮುಂದೇ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಸದಸ್ಯ ನಾಗರಾಜ ಭಂಕಲಗಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಪೂರೈಕೆ ಮಾಡುವ ಮೊಟ್ಟೆಗಳು, ಪೂರಕ ಪೌಷ್ಠಿಕ ಆಹಾರ ಪದಾರ್ಥಗಳು ದನ ಕೂಡ ತಿನ್ನಲ್ಲ. ಅಂತಹ ಕಳಪೆ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದೀರಿ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಏನೇನು ಕೊಡುತ್ತಿದ್ದೀರಿ ಎನ್ನುವುದು ವಾರ್ಡಗಳ ಸದಸ್ಯರಿಗೆ ಮಾಹಿತಿಯೇ ಇಲ್ಲ ಎಂದಾಗ, ಸಿಡಿಪಿಓ ಮಾತನಾಡಿ, ಪ್ರತಿಯೊಬ್ಬ ಅಂಗನವಾಡಿ ಶಿಕ್ಷಕಿಯರಿಗೆ ಸದಸ್ಯರಿಗೆ ಮಾಹಿತಿ ನೀಡಲು ಆದೇಶ ಮಾಡುತ್ತೇನೆ ಎಂದರು.
ಸದಸ್ಯರಾದ ನಾಗರಾಜ ಭಂಕಲಗಿ, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ರಮೇಶ ಬಮ್ಮನಳ್ಳಿ ಮಾತನಾಡಿ, ಲ್ಯಾಂಡ್ ಆರ್ಮಿ ಅವರು ಕಟ್ಟಿರುವ ಯಾತ್ರಿಕ ನಿವಾಸದಲ್ಲಿ ಯಾರು ಬೇಕು ಅವರು ಬರ್ತಾರೇ, ದೇವರು ಮಾಡಿ ಹೋಗುತ್ತಿದ್ದಾರೆ. ಅದು ಯಾತ್ರಿಕ ನಿವಾಸವೇ ಅನ್ನಿಸುತ್ತಿಲ್ಲ. ಅಲ್ಲಿ ಯಾವುದೇ ಮೂಲ ಸೌಕರ್ಯಗಳೇ ಇಲ್ಲ. ಲ್ಯಾಂಡ್ ಆರ್ಮಿಯಿಂದ ನಡೆಯುತ್ತಿರುವ ಪ್ರತಿಯೊಂದು ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಿಂದ ನಡೆಯುತ್ತಿವೆ. ಏನಾದರೂ ಮಾಹಿತಿ ಕೇಳಲು ದೂರವಾಣಿ ಕರೆ ಮಾಡಿದರೆ ಕರೆಗಳು ಸ್ವೀಕರಿಸಲ್ಲ. ಒಂದು ವೇಳೆ ಕರೆ ಸ್ವೀಕರಿಸಿದರೆ ಉಡಾಫೇ ಉತ್ತರ ನೀಡುತ್ತಾರೆ. ಅವರಿಗೆ ಹೀಗೆ ಬಿಟ್ಟರೇ ಊರೇ ಕೊಳ್ಳೆ ಹೊಡೆದು ಹೋಗುತ್ತಾರೆ. ಹೀಗಾಗಿ ಲ್ಯಾಂಡ್ ಆರ್ಮಿಗೆ ಕೆಲಸ ಕೊಡಬಾರದು ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆಯಿರಿ ಎಂದರು.
ಮಹಿಳಾ ಮೀಸಲಾತಿಯಡಿ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದೀರಿ, ಹೀಗಾಗಿ ತಾವುಗಳೇ ಅಧಿಕಾರ ಚಲಾಯಿಸಬೇಕು. ಬೇರೆಯವರಿಗೆ ಅಧಿಕಾರ ಚಲಾಯಿಸಲು ಬಿಡಬಾರದು. ವಾರ್ಡ್’ಗಳ ಸದಸ್ಯರಿಗೆ ಮಾಹಿತಿ ಇಲ್ಲದೇ ವಾರ್ಡ್’ಗಳಿಗೆ ಭೇಟಿ ನೀಡುತ್ತಿದ್ದೀರಿ ಇದು ಎಷ್ಟರ ಮಟ್ಟಿಗೆ ಸರಿ ? ಈ ರೀತಿಯ ಸರ್ವಾಧಿಕಾರಿ ಧೋರಣೆ ಅನುಸರಿಸುವುದು ಸರಿಯಲ್ಲ ಎಂದು ಸದಸ್ಯರಾದ ಶೀಲಾ ಕಾಶಿ, ಚಂದ್ರಶೇಖರ ಕಾಶಿ, ಮಹ್ಮದ್ ರಸೂಲ್ ಮುಸ್ತಫಾ, ಮಲ್ಲಿಕಾರ್ಜುನ ಕಾಳಗಿ, ಪಾಶಾ ಖುರೇಶಿ ಹೇಳಿದಾಗ, ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ಮಾತನಾಡಿ, ಸದಸ್ಯರ ಗಮನಕ್ಕೆ ಯಾಕೆ ತರಬೇಕು, ನಾನು ಅಧ್ಯಕ್ಷೆ ಇದ್ದೀನಿ ನನಗೆ ಭೇಟಿ ಕೊಡುವ ಹಕ್ಕಿದೆ ಎಂದು ಹೇಳಿದ ಕೂಡಲೇ 23 ವಾರ್ಡ್’ಗಳ ಸದಸ್ಯರ ಗಮನಕ್ಕೆ ತರದೇ ನೀವು ಒಬ್ಬರೇ ಭೇಟಿ ಕೊಡುವುದಾರೇ ಸದಸ್ಯರು ರಾಜಿನಾಮೆ ನೀಡಿ ಮನೆಗೆ ಹೋಗಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಉಪಾಧ್ಯಕ್ಷೆ ಆತೀಯಾ ಬೇಗಂ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸದಸ್ಯರಾದ ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಪಾಶಾ ಖುರೇಶಿ, ಶೀಲಾ ಕಾಶಿ, ನಾಗರಾಜ ಭಂಕಲಗಿ, ರಮೇಶ ಬಮ್ಮನಳ್ಳಿ, ಮಹ್ಮದ್ ರಸೂಲ್ ಮುಸ್ತಫಾ, ಶೃತಿ ಪೂಜಾರಿ, ವಿನೋದ್ ಗುತ್ತೇದಾರ, ಜಗದೀಶ ಚವ್ಹಾಣ, ಶ್ರೀನಿವಾಸ್ ರೆಡ್ಡಿ, ಶಿವರಾಜ ಪಾಳೇದ್, ಸಂತೋಷ ಚೌದ್ರಿ, ಪ್ರಭು ಗಂಗಾಣಿ, ಶ್ಯಾಮ್ ಮೇಧಾ, ಬೇಬಿಬಾಯಿ, ಕಾಶಿಬಾಯಿ ಬೆಣ್ಣೂರ್, ಶಹನಾಜ್ ಬೇಗಂ, ಸುಶೀಲಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪುರಸಭೆ ಕಚೇರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ವರದಿ ಮೊಹಮ್ಮದ್ ಆಲಿ ಚಿತ್ತಾಪುರ
