ಶಿವಮೊಗ್ಗ : ಶ್ರೀಮತಿ ಭಾಗ್ಯ ಮತ್ತ ನಾಗರಾಜ ಇವರುಗಳು ಎಲ್‌ಐಸಿ ಇಂಡಿಯಾ ಇವರ ವಿರುದ್ದ ತಮ್ಮ ಸಹೋದರನಿಗೆ ದೊರಕಬೇಕಾದ ವಿಮಾ ಮೊತ್ತ ನೀಡದೇ ಸೇವಾ ನ್ಯೂನತೆ ಎಸಗಿರುವ ಕುರಿತು ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ಶ್ರೀಮತಿ ಭಾಗ್ಯ ಮತ್ತು ನಾಗರಾಜ ಇವರುಗಳು 1 ನೇ ಎದುರುದಾರ ಝೋನಲ್ ಮ್ಯಾನೇಜರ್ ಎಲ್‌ಐಸಿ ಆಫ್ ಇಂಡಿಯಾ ಹೈದರಾಬಾದ್, 2ನೇ ಎದುರುದಾರ ಸೀನಿಯರ್ ಡಿವಿಷನಲ್ ಮ್ಯಾನೇಜರ್, ಎಲ್‌ಐಸಿ ಇಂಡಿಯಾ, ಡಿವಿಷನಲ್ ಆಫೀಸ್ ಶಿವಮೊಗ್ಗ ಮತ್ತು ಇತರರ ವಿರುದ್ದ ದೂರು ದಾಖಲಿಸಿ ತಮ್ಮ ಸಹೋದರ ಶಿವು 1 ಮತ್ತು 2 ನೇ ಎದುರುದಾರರಿಂದ ರೂ.1,00,000 ರಂತೆ 10 ಪಾಲಿಸಿಗಳನ್ನು ಮತ್ತು ರೂ.2,50,000 ರಂತೆ 01 ಪಾಲಿಸಿ (ಸಮ್ ಅಶ್ಯುರ್ಡ್) ಪಡೆದಿರುತ್ತಾರೆ. ದುರುದೃಷ್ಟವಶಾತ್ ಸಹೋದರ ಶಿವು ಹೃದಯಾಘಾತದಿಂದ ಮರಣ ಹೊಂದಿದ್ದು, ತದನಂತರ ಪಾಲಿಸಿಯ ಹಣ ಪಡೆಯುವ ಸಲುವಾಗಿ 1 ಮತ್ತು 2ನೇ ಎದುರುದಾರರನ್ನು ಸಂಪರ್ಕಿಸಿ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡಿ ಹಣ ನೀಡಲು ವಿನಿಂತಿಸಿದಾಗ, ಎದುರುದಾರರು ಪಾಲಿಸಿಗಳ ಹಣ ನೀಡುವ ಬದಲು ಮೃತ ಸಹೋದರ ತಮಗಿದ್ದ ಹಿಂದಿನ ಖಾಯಿಲೆಗಳನ್ನು ಮರೆಮಾಚಿ ಪಾಲಿಸಿಗಳನ್ನು ಪಡೆದಿರುವುದರಿಂದ ಕ್ಲೇಮನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿರುವ ಕಾರಣ ಆಯೋಗದ ಮುಂದೆ ದೂರನ್ನು ಸಲ್ಲಿಸಿರುತ್ತಾರೆ.
ಎದುರುದಾರರಿಗೆ ಆಯೋಗವು ನೋಟಿಸ್ ಕಳುಹಿಸಿದ್ದು, 1 ಮತ್ತು ಇತರೆ ಎದುರುದಾರರು ನೋಟಿಸ್ ಪಡೆದು ಆಯೋಗದ ಮುಂದೆ ಹಾಜರಾಗದ ಕಾರಣ ಏಕ ಪಕ್ಷೀಯವಾಗಿಟ್ಟು, 2ನೇ ಎದುರುದಾರರು ತಮ್ಮ ವಕೀಲರ ಮುಖಾಂತರ ಹಾಜರಾಗಿ ಆಕ್ಷೇಪಣೆಯನ್ನು ಸಲ್ಲಿಸಿ ದೂರುದಾರರು ಹಣ ಮಾಡುವ ಸಲುವಾಗಿ ಸುಳ್ಳು ಮಾಹಿತಿ ನೀಡಿ ಮತ್ತು ತನಗಿದ್ದ ಪಾಲಿಸಿ ಪಡೆಯುವ ಮುಂಚಿನ ಖಾಯಿಲೆಗಳನ್ನು ಮರೆ ಮಾಚಿ 11 ಪಾಲಿಸಿ ಪಡೆದಿರುವುದರಿಂದ, ಪಾಲಿಸಿ ಷರತ್ತು ಮತ್ತು ನಿಬಂಧನೆಗನುಗುಣವಾಗಿ ದೂರುದಾರರ ಕ್ಲೇಮನ್ನು ತಿರಸ್ಕರಿಸಿದ್ದು ಇದರಲ್ಲಿ ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವಾದ ಕಾರಣ ದೂರನ್ನು ವಜಾ ಮಾಡಬೇಕಾಗಿ ವಿನಂತಿಸಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣನೆಗೆ ತೆಗೆದುಕೊಂಡು, ಎದುರುದಾರರು ಸಲ್ಲಿಸಿರುವ ದಾಖಲೆಗಳು ದೂರುದಾರರ ಕ್ಲೇಮನ್ನು ತಿರಸ್ಕರಿಸಲು ಪೂರಕವಾಗಿರವುದಿಲ್ಲ. ಆದ್ದರಿಂದ ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರುದಾರರು ಸಲ್ಲಿಸಿರುವ ದೂರನ್ನು ಭಾಗಶಃ ಪುರಸ್ಕರಿಸಿ, ಈ ಆದೇಶವಾದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು 11 ಪಾಲಿಸಿಗಳ ಸಮ್ ಅಶ್ಯುರ್ಡ್ ಮೊತ್ತ ರೂ.12,50,000 ಗಳನ್ನು ಮತ್ತು ಅದರೊಂದಿಗೆ ಬರುವ ಅಕ್ರೂಡ್ ಬೆನಿಫಿಟ್‌ಗೆ ಶೇ.9 ರಂತೆ ಬಡ್ಡಿ ಸೇರಿಸಿ ಪಾವತಿಸಲು, ತಪ್ಪಿದಲ್ಲಿ ಸದರಿ ಮೊತ್ತಕ್ಕೆ ಶೇ.12 ರಂತೆ ಬಡ್ಡಿಯನ್ನು ಪೂರಾ ಹಣ ಕೊಡುವವರೆಗು ನೀಡಬೇಕೆಂದು ಹಾಗೂ ರೂ.30,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮಾ.19 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್
