ನಾನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಇರುವ ವಿದ್ಯಾರ್ಥಿ. ಈ ನಿಲಯ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಬರುತ್ತದೆ. ಬಿಸಿಎಂ 1580-1582 ವಿದ್ಯಾರ್ಥಿ ನಿಲಯದ ಸಂಖ್ಯೆ ಆಗಿದೆ.
ದಿ. 28/03/2025 ರಂದು ಸಂಜೆ ಐದು ಗಂಟೆಗೆ ಹಾಸ್ಟೆಲ್ ನಲ್ಲಿ ಕೊಡುವ ಟೀ ಕುಡಿಯಲು ಲೋಟ ತೆಗೆದುಕೊಂಡು ಹೋದೆ ಟೀ ಸಿದ್ಧವಾಗಿದ್ದರಿಂದ, ಟೀ ತುಂಬಿಸಿ ಇಟ್ಟಿದ್ದ ಪಾತ್ರೆಯ ಬಳಿ ಬಂದೆ. ಅಡುಗೆಯವರೊಬ್ಬರು ಅವರ ಒಂದು ಲೋಟದಲ್ಲಿ ಟೀ ಬಿಟ್ಟುಕೊಂಡು, ನನ್ನ ಲೋಟಕ್ಕೆ ಟೀ ಉಯ್ಯಲು ಬಂದರು, ಇಷ್ಟು ದಿನ ಇಲ್ಲದ ಈ ಪದ್ಧತಿ ಯಾಕೆ? ಎಂದೆ.
ನಿಲಯ ಮೇಲ್ವಿಚಾರಕರ ಆಜ್ಞೆ ಎಂದು ಉತ್ತರಿಸಿದ. ಆ ಕ್ಷಣದಲ್ಲಿ ನಾವಿನ್ನೂ “ಅಸ್ಪೃಶ್ಯತೆಯಿಂದ ಹೊರಗಡೆ ಬಂದಿಲ್ಲ ಅಂತ ಅನಿಸಿತು”. ಇಲ್ಲಿ ಪೌಷ್ಟಿಕತೆಯ ತರಕಾರಿಗಳನ್ನು ಬಳಸಲ್ಲ, ಬಳಸಿದರೂ ಮಾರುಕಟ್ಟೆಯಲ್ಲಿ ತೀರಾ ಕಡಿಮೆ ಬೆಲೆಗೆ ಸಿಗುವ ತರಕಾರಿಗಳನ್ನು ಮಾತ್ರ ಬಳಸುತ್ತಾರೆ. ಅಡುಗೆಯ ಗುಣಮಟ್ಟ ಹೇಳತೀರದು. ಹಸಿವು ನೀಗಿಸಿಕೊಳ್ಳಲು ತಿನ್ನಬೇಕು ಅಷ್ಟೇ. ಈ ವಿಚಾರದಲ್ಲಿ ಅಡುಗೆ ಭಟ್ಟರನ್ನು ದೂರುವಂತಿಲ್ಲ. ಅಡುಗೆಗೆ ಬೇಕಾದ ಸೌಲಭ್ಯಗಳು ಇಲ್ಲದೆ ಅವರು ತಾನೇ ಏನು ಮಾಡಲು ಸಾಧ್ಯ. ನಿಲಯ ಮೇಲ್ವಿಚಾರಕರ ಬಳಿ ಸಾಕಷ್ಟು ಸಲ ಹೇಳಿದ್ದು ಆಗಿದೆ, ಆದರೆ ಯಾವುದೇ ಬದಲಾವಣೆ ಆಗಿಲ್ಲ. ಈ ಹಾಸ್ಟೆಲ್ ನಲ್ಲಿ ಕೋಳಿ ಮಾಂಸ ಮಾಡಿದಾಗ ಸರ್ಕಾರದ ಆದೇಶದಂತೆ ಅಳತೆ ಮಾಡಿ ಕೊಡುವುದಿಲ್ಲ. ವಿದ್ಯಾರ್ಥಿಗಳ ಮುಖ ನೋಡಿ ಮಾಂಸದ ತುಣುಕನ್ನು ಹಾಕುತ್ತಾರೆ. ಇದೆಂತಹ ನೀಚ ಪದ್ಧತಿ ಅಂತ ನೀವೇ ಅರಿಯಬೇಕು.
ಇಷ್ಟೇ ಅಲ್ಲ ಈ ನಿಲಯದಲ್ಲಿ ಕಂಪ್ಯೂಟರ್ ಕೋಣೆಯಿದೆ, ಆದರೆ ಒಂದೇ ಒಂದು ಕಂಪ್ಯೂಟರ್ ಇಲ್ಲ. ಈ ವಿಷಯದ ಬಗ್ಗೆ ಅದೆಷ್ಟೋ ಸಲ ಕೇಳಿದ್ದೆ, ಆದರೆ ಯಾರೊಬ್ಬರೂ ಸರಿಯಾಗಿ ಉತ್ತರಿಸಲಿಲ್ಲ. ಹಿಂದಿನ ವರ್ಷದ ಮೂರು ತಿಂಗಳ ಸೋಪ್ ಕಿಟ್ ಮತ್ತು ಈ ವರ್ಷದ ಜನವರಿ ತಿಂಗಳ ಸೋಪ್ ಕಿಟ್ ಸಹ ನಮಗೆ ಕೊಟ್ಟಿಲ್ಲ.ಈ ಬಗ್ಗೆ ಆಯುಕ್ತರಿಗೆ ಪತ್ರ ಬರೆದು, ನಿಲಯದಲ್ಲಿರುವ ವಿದ್ಯಾರ್ಥಿಗಳ ಸಹಿಯನ್ನು ಪಡೆದು ವಸಂತ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರ ಬಳಿ ಹೋಗಿ ಪ್ರತ್ರ ನೀಡಿದ್ದೆ. ಸೋಪ್ ಕಿಟ್ ಕೊಡದಿರುವ ನಾಲ್ಕು ತಿಂಗಳ ಬಗ್ಗೆ ಕೇಳಿದೆ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ತಿರಸ್ಕಾರ ನೋಟದಿಂದ ನನ್ನನ್ನು ನೋಡುತ್ತಾ ಮುಂದೆ ನಡೆದರು. ಸರ್ಕಾರದ ಹಣವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾನು ಇರುವ ಹಾಸ್ಟೆಲ್ ನಲ್ಲೆ ಹೀಗಿದೆ ಎಂದರೆ ರಾಜ್ಯದಲ್ಲಿ ಇರುವ ಬಿಸಿಎಂ ಹಾಸ್ಟೆಲ್ ಗಳಲ್ಲಿ ಎಷ್ಟು ಮೋಸ ಆಗಬಹುದು ಯೋಚನೆ ಮಾಡಿ. ಈ ಬಗ್ಗೆ ಇದಕ್ಕೆ ಸಂಬಂಧಿಸಿದ ಉನ್ನತ ಅಧಿಕಾರಿಗಳಿಗೆ ಅಥವಾ ಮಾನ್ಯ ಮುಖ್ಯ ಮಂತ್ರಿಯವರ ಗಮನಕ್ಕೆ ತರುವುದು ಉತ್ತಮ. ಯಾಕೆಂದರೆ ದುಷ್ಟ ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಬಿಸಿಎಂ ಹಾಸ್ಟೆಲ್ನಲ್ಲಿ ಇರುವ ಅಸಂಖ್ಯೆಯ ವಿದ್ಯಾರ್ಥಿಗಳನ್ನು ಮತ್ತು ಈ ಸಮಾಜವನ್ನು ವಂಚಿಸುತ್ತಿದ್ದಾರೆ.
- ರಾಮಕೃಷ್ಣ. ಎನ್ (ಬಿ.ಸಿ.ಎಂ ಹಾಸ್ಟೆಲ್ ವಿದ್ಯಾರ್ಥಿ)
