
ಬಳ್ಳಾರಿ / ಕಂಪ್ಲಿ : ನಗರದಲ್ಲಿ ಸೋಮವಾರ ಈದ್ – ಉಲ್ – ಫಿತ್ರ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಿಸಿದರು.
ಒಂದು ತಿಂಗಳ ಉಪವಾಸ ವ್ರತಾಚರಣೆ ಪೂರೈಸಿದ ಮುಸ್ಲಿಂ ಸಮುದಾಯದವರು ಶ್ರದ್ಧಾ ಭಕ್ತಿ ದಾನ – ಧರ್ಮದ ಸಂಕೇತವಾದ ಪವಿತ್ರ ರಂಜಾನ್ ಹಬ್ಬವನ್ನು ಇಂದು ಸೋಮವಾರ ರಂಜಾನ್ ಈದ್ ಅನ್ನು ಆಚರಿಸಿದರು.

ನಗರದ ಪ್ರಥಮ ದರ್ಜೆ ಕಾಲೇಜು ಬಳಿ ಇರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಝ್, ಧಾರ್ಮಿಕ ಪ್ರವಚನಗಳು ನಡೆದವು.
ಹೊಸ ಬಟ್ಟೆ ಧರಿಸಿ ಬಂದಿದ್ದ ಹಿರಿಯರು, ಮಕ್ಕಳು ಪರಸ್ಪರ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.
ಬಳ್ಳಾರಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ನಡೆದ ನಮಾಜ್ ನಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಎನ್. ಗಣೇಶ ಭಾಗಿಯಾಗಿ ಸಮಸ್ತ ಮುಸ್ಲಿಮರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದರು.
ಹಾಜಿ ಮಹಮ್ಮಜೀಯಾವುದ್ದೀನ್ ರಜ್ವಿ ಪ್ರವಚನ ನೀಡಿ ಮಾತನಾಡಿ ಹಾಗೂ ಒಂದು ತಿಂಗಳ ಕಾಲ ಕಠಿಣ ವೃತಾಚರಣೆಯ ಬಳಿಕ ಈದ್-ಉಲ್-ಫಿತರ್ ಬಂದಿದೆ. ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವ್ರತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ಮುಸ್ಲಿಮರೆಲ್ಲರೂ ಸಮಾನರೆನಿಸಿದರು. ಇಲ್ಲಿ ಬಡವ – ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ವ್ರತಾಚರಣೆಯಲ್ಲಿ ತೊಡಗಿದರು. ಅಲ್ಲಾಹನನ್ನು ಪ್ರಾರ್ತಿಸುತ್ತಾ ಎಲ್ಲಾ ರೀತಿಯ ತಪ್ಪುಗಳಿಂದ ದೂರವಿದ್ದ ಒಂದು ತಿಂಗಳು ಕಳೆದು ಈದ್-ಉಲ್-ಫಿತರ್ ಬಂದಿದೆ. ಇದು ದಾನದ ಹಬ್ಬ. ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದು ಅರಿತ ಮುಸ್ಲಿಮನಿಗೆ ಈಗ ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯಿಯಾಗುವುದು ಕರ್ತವ್ಯ. ಇಸ್ಲಾಮಿನ ಐದು ಪ್ರಧಾನ ಕರ್ಮಗಳಲ್ಲಿ ಒಂದಾದ ‘ಝಕಾತ್’ ಇದಕ್ಕೆ ಪುಷ್ಟಿ ನೀಡುತ್ತದೆ. ಅದಲ್ಲದೇ ಹಲವಾರು ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಕಡ್ಡಾಯಗೊಳಿಸುತ್ತದೆ ಎಂದು ತಿಳಿಸಿದರು.
ಮಹಮ್ಮದ ಸಿರಾಜುದ್ದೀನ ಖಲಂದರಿ ಖುತ್ಬಾ ಪಾರಾಯಣ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಜೆ. ಎನ್. ಗಣೇಶರವರನ್ನು ಮುಸ್ಲಿಂ ಸಮಾಜದವರು ಸನ್ಮಾನಿಸಿ ಗೌರವಿಸಿದರು. ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ ಉಸ್ಮಾನ್, ಕಂಪ್ಲಿ ತಾಲೂಕಿನ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್ ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್.
