
ಬಳ್ಳಾರಿ / ಕಂಪ್ಲಿ : ದೇಶಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳ ಉಪವಾಸ ಅಂತ್ಯಗೊಂಡಿದ್ದು, ಇಂದು ಪವಿತ್ರ ರಂಜಾನ್ ಹಬ್ಬ ಆಚರಿಸುತ್ತಿದ್ದಾರೆ. ಈ ಸಾಮೂಹಿಕ ಪ್ರಾರ್ಥನಾ ಸಮಯದಲ್ಲಿ ಪ್ಯಾಲೆಸ್ತೀನ್ ಯನ್ನರ ಮೇಲಿನ ಇಸ್ರೇಲ್ ದಾಳಿ ನಿಲ್ಲುವಂತೆ ಸಾಮೂಹಿಕವಾಗಿ ಪ್ರಾರ್ಥಿಸಿದರು. ಹಾಗೂ ವಕ್ಫ್ ತಿದ್ದುಪಡಿ ಮಸೂದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು, ಇಲ್ಲಿನ ಎಸ್.ಡಿ.ಪಿ.ಐ ಪದಾಧಿಕಾರಿಗಳು ಸೋಮವಾರ ಪಟ್ಟಣದ ಖದೀಮ್ ಈದ್ಗಾ ಮೈದಾನ, ಖದೀಮ್ ಸುನ್ನಿ ಈದ್ಗಾ ಮೈದಾನ, ಅಲಿ ಪಬ್ಲಿಕ್ ಶಾಲೆಯ ಹತ್ತಿರ ಇರುವ ಬೆಳಗೋಡು ರಸ್ತೆಯ ಬಳಿಯಲ್ಲಿ ಕರಪತ್ರ ವಿತರಿಸಿ, ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಎಸ್‌ಡಿಪಿಐ ಅಧ್ಯಕ್ಷ ಮಹಮ್ಮದ್ ರಫಿಕ್ ಮಾತನಾಡಿ, ಇಸ್ರೇಲ್ ಯುದ್ಧ ನಿಲ್ಲಬೇಕು. ಎಲ್ಲೆಡೆ ಶಾಂತಿ ನೆಲಸಬೇಕು. ಇದಕ್ಕಾಗಿ ವಿಶ್ವಸಂಸ್ಥೆ ತಕ್ಕ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ವಿರೋಧಿ ಹೋರಾಟಗಾರರ ಮೇಲೆ, ಎಸ್‌ಡಿಪಿಐ ನಾಯಕರು, ಕಾರ್ಯಕರ್ತರ ವಿರುದ್ಧ ಇಡಿ ದಾಳಿ ನಡೆಯುತ್ತಿರುವುದು ಸರಿಯಲ್ಲ. ತನಿಖಾ ಏಜೆನ್ಸಿಗಳ ಹಾಗೂ ಕರಾಳ ಕಾನೂನು ದುರುಪಯೋಗವನ್ನು ಒಗ್ಗಟ್ಟಿನಿಂದ ವಿರೋಧಿಸಬೇಕು. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅನನ್ಯತೆಯನ್ನು ಬಲಪಡಿಸಲು ಸರ್ವರೂ ಸಂಘಟಿತರಾಗಬೇಕು ಎಂದು ಹೇಳಿದರು.
ಎಸ್‌ಡಿಪಿಐ ಪದಾಧಿಕಾರಿಗಳಾದ ಯು. ಜಿಲಾನ್ ಸಾಬ್, ಇಮ್ರಾನ್‌ಖಾನ್, ಇರ್ಷಾದ್, ದೌಲಖಾನ್, ಅಲ್ತಾಫ್, ಯಾಸೀನ್, ಹೊನ್ನೂರ್‌ವಲಿ ಇತರರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ
