ಮನದೊಳಗೆ ಹುತ್ತ ಗಟ್ಟಿ,
ಆಲೋಚನೆಗಳ ಹೆಪ್ಪಾಗಿಸುವ
ಸ್ವಾರ್ಥ, ಭ್ರಷ್ಟತೆ, ಹೀನ ಚಿಂತನೆಗಳ
ಬೇರು ಸಹಿತ ತೆಗೆದು ಬಿಡಲು
ಒಮ್ಮೆ ಇಡೀ ಮನಸ್ಸನ್ನು
ಡಯಾಲಿಸಿಸ್ ಮಾಡಿಸಿಬಿಡು,
ಸಮಾಜವನ್ನು ನೋಡುವ
ನಿನ್ನ ಹೀನ ದೃಷ್ಟಿಯನ್ನೊಮ್ಮೆ
ಬದಲಿಸಿಬಿಡಲು
ನಿನ್ನ ದೃಷ್ಟಿಕೋನಕ್ಕೆ
ಮುಚ್ಚಿರುವ ಸ್ವಾರ್ಥ,ಅಹಂಕಾರಗಳ
ಪೊರೆಯ ಒಮ್ಮೆ ತೆಗೆದುಬಿಡು,
ನಿನ್ನ ಮನದ ಸ್ವಾರ್ಥದ ಕಳೆಯ
ಈ ಕ್ಷಣದಲ್ಲೇ ಕಳೆದುಬಿಡು,
ಕಾಡುತ್ತಿರುವ ಹಳೆಯ ಮಲಿನ ನೆನಪುಗಳ
ಬೇರು ಸಹಿತ ತೆಗೆಯಲು
ನೆನಪಿಗೆ ಒಂದು ಶಸ್ತ್ರ ಚಿಕಿತ್ಸೆ ಮಾಡಿಸಿಬಿಡು,
ನಿನ್ನ ಬದುಕ ಸಾರ್ಥಕಗೊಳಿಸಿಬಿಡು.
- ಡಾ. ಭೇರ್ಯ ರಾಮಕುಮಾರ್
