
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಗುರುಗಳ ಸಾರ್ಥಕ ಸೇವೆ ಮತ್ತು ಅವಿಸ್ಮರಣೀಯ ನೆನಪುಗಳ ಸಂಭ್ರಮ – ೨೦೨೫ ಕಾರ್ಯಕ್ರಮವು ಅದ್ದೂರಿಯಾಗಿ, ವಿಜೃಂಭಣೆಯಿಂದ ಜರುಗಿತು.
ಸಾರೋಟಿನಲ್ಲಿ ಗುರುಗಳ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಿ.ಜೆ, ಸಾಂಪ್ರದಾಯಿಕ ನೃತ್ಯದೊಂದಿಗೆ ಸಂಭ್ರಮದಿಂದ ಸಾಗುತ್ತಾ ಶಾಲೆಯ ಆವರಣ ತಲುಪಿದಾಗ ವಿದ್ಯಾರ್ಥಿಗಳು ಪುಷ್ಪವೃಷ್ಟಿಯ ಮೂಲಕ ಅಚ್ಚುಮೆಚ್ಚಿನ ಗುರುಗಳನ್ನು ವೇದಿಕೆಗೆ ಕರೆ ತಂದರು. ಗುರು ವೃಂದ ಹಾಗೂ ವೇದಿಕೆಯ ಮೇಲಿದ್ದ ಗಣ್ಯರು ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾರ್ಥನೆಯ ನಂತರ ಗುರುಗಳಿಗೆ ಗೌರವ ಸನ್ಮಾನ ನೆರವೇರಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎಂ. ಕೃಷ್ಣಪ್ಪ ಅವರು ಮಾತನಾಡಿ ಪಾಠ ಹೇಳಿ ಜ್ಞಾನಾರ್ಜನೆ ಮಾಡಿಸಿ ಬದುಕಿಗೆ ಬೆಳಕಾದ ಪ್ರಾಥಮಿಕ ಶಿಕ್ಷಕರನ್ನು ಮರೆಯಬಾರದು, ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಪ್ರತ್ಯಕ್ಷವಾದ ಧನ್ಯತಾ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಿರಿಯ ವಿದ್ಯಾರ್ಥಿಗಳು 28 ವರ್ಷದ ನಂತರ ಒಂದಡೆ ಸೇರಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಮಾಜಿ ಆಗದ ಹುದ್ದೆ ಎಂದರೆ ಅದು ಶಿಕ್ಷಕ ವೃತ್ತಿ, ಒಬ್ಬ ಶಿಕ್ಷಕನಿಗೆ ಬೆಳ್ಳಿ, ಬಂಗಾರ, ಆಸ್ತಿ, ಅಂತಸ್ತು ನೀಡಿದರೆ ಸಂತೃಪ್ತಿ ಆಗಲಾರ, ತಾನು ವಿದ್ಯೆ ಕಲಿಸಿದ ವಿದ್ಯಾರ್ಥಿ ಉನ್ನತ ಮಟ್ಟಕ್ಕೆ ಬೆಳೆದರೆ ಮಾತ್ರ ಗುರುವಿನ ಸೇವೆ ಸಾರ್ಥಕವಾಗುತ್ತದೆ, ಶಿಕ್ಷಕರು ಅಪೇಕ್ಷೆ ಇಲ್ಲದೆ ಶಿಷ್ಯರ ಭವಿಷ್ಯ ರೂಪಿಸುತ್ತಾರೆ ಜೀವನಕ್ಕೆ ಮಾರ್ಗದರ್ಶಕರಾಗಿರುತ್ತಾರೆ ಎಂದು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಅಭಿನವ ಶ್ರೀ ಕರಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ನುಡಿದರು.
ನಂತರ ನೆಚ್ಚಿನ ಗುರುಗಳು ತಮ್ಮ ಸೇವಾವಧಿಯಲ್ಲಿನ ಅನುಭವಗಳ ಜೊತೆ ಜೊತೆಗೆ ತಮ್ಮ ವಿದ್ಯಾರ್ಥಿಗಳು ಆಗಿನ ಕಾಲದಲ್ಲಿ ವಿದ್ಯಾರ್ಥಿಗಳು ಪಡುತ್ತಿದ್ದ ಕಷ್ಟಗಳು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಒಗ್ಗಟ್ಟಿನಿಂದ ಸಾಕಾರವಾದ ಈ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ನುಡಿಗಳನ್ನಾಡುವುದರೊಂದಿಗೆ ಜೀವನಕ್ಕೆ ಉಪಯುಕ್ತವಾದ ಹಲವಾರು ವಿಷಯಗಳನ್ನು ಕೂಡಾ ಉದಾಹರಣೆ ಸಹಿತ ವಿವರಿಸುವುದರೊಂದಿಗೆ ತಮ್ಮ ಸಂತಸ ವ್ಯಕ್ತಪಡಿಸಿ, ಶುಭ ಹಾರೈಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಗುನ್ನಾಳ ಹಾಗೂ ಸಂಜೀವಿನಿ ರಕ್ತನಿಧಿ ಕೇಂದ್ರ ಕೊಪ್ಪಳ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು, ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಹಲವರು ರಕ್ತದಾನ ಮಾಡಿದರು.
ವೇದಿಕೆಯ ಪಕ್ಕದಲ್ಲಿದ್ದ ಸೆಲ್ಫಿ ಪಾಯಿಂಟ್ ನಲ್ಲಿ ನೆಚ್ವಿನ ಗುರುಗಳು , ಸಹಪಾಠಿಗಳೊಂದಿಗೆ ಗ್ರೂಪ್ ಫೋಟೋ ಹಾಗೂ ಸೆಲ್ಫಿಗಳ ಸುರಿಮಳೆ ಆಗುತ್ತಿದ್ದರೆ ,
ಮಧ್ಯಾಹ್ನದ ವೇಳೆಗೆ ಸಹಪಾಠಿಗಳ ಜೊತೆ ಸೇರಿ ರೊಟ್ಟಿ, ಚಪಾತಿ, ಗೋಧಿ ಹುಗ್ಗಿ, ಮೊಸರನ್ನ, ಬದನೆಕಾಯಿ ಪಲ್ಯ ,ದಾಲ್ , ಅನ್ನ ಸಾಂಬಾರ್ ನೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಶುಚಿ ರುಚಿಯಾದ ಭೋಜನ ಸವಿಯುವ ಆ ಕ್ಷಣಗಳಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು.
ನಂತರ 1997 ರಿಂದ 2024 ರವರೆಗಿನ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಸಹಪಾಠಿಗಳೊಂದಿಗೆ ವೇದಿಕೆಗೆ ಬಂದು ಗುರುಗಳ ಪಾದ ಸ್ಪರ್ಶಿಸಿ, ಆಶೀರ್ವಾದ ತೆಗೆದುಕೊಂಡು ಸನ್ಮಾನಿಸಿ, ಗ್ರೂಪ್ ಫೋಟೋ ಜೊತೆಗೆ ತಮ್ಮ ತರಗತಿಯಲ್ಲಿ ಓದಿ ಪ್ರಸ್ತುತ ಸರ್ಕಾರಿ ನೌಕರಿಯಲ್ಲಿರುವ ಸಹಪಾಠಿಗಳ ಸನ್ಮಾನಕ್ಕೂ ಸಾಕ್ಷಿಯಾದರು.
ಇನ್ನೇನು ಸೂರ್ಯ ತನ್ನ ಕರ್ತವ್ಯ ಮುಗಿಸುವ ವೇಳೆಗೆ ಭಾರದ ಮನಸಿನಿಂದ ಬೆಳಿಗ್ಗೆಯಿಂದ ಜೊತೆಗಿದ್ದ ಸ್ನೇಹಿತರು, ನೆಚ್ಚಿನ ಗುರುಗಳನ್ನು ಒಬ್ಬೊಬ್ಬರಾಗಿ ನೆನೆಪಿನ ಕಾಣಿಕೆಯೊಂದಿಗೆ ಬೀಳ್ಕೊಟ್ಟರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರ ಮುಖದಲ್ಲಿ ಒಂದು ಉತ್ತಮ ಅವಿಸ್ಮರಣೀಯ ನೆನಪುಗಳ ಸಂಭ್ರಮದಲ್ಲಿ ಭಾಗವಹಿಸಿದ್ದ ಸಾರ್ಥಕ ಭಾವನೆ ಎದ್ದು ಕಾಣುತ್ತಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕರಯ್ಯ, ಸುಳ್ಯ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎಂ ಕೃಷ್ಣಪ್ಪ, ಶ್ರೀಮತಿ ಶಕುಂತಲಾ ರೆಡ್ಡಿ , ನೀಲಪ್ಪ ಗೋನಾಳ, ಶರಣಪ್ಪ ಉಳ್ಳಾಗಡ್ಡಿ, ಅರುಣಕುಮಾರ್ ದೇಸಾಯಿ, ನಾಗಭೂಷಣ ಚಿನಿವಾಲರ , ವೆಂಕಟೇಶ ಗೌಡರ, ಮಹಮದ್ ಮೈನುದ್ದೀನ್ ಖಾಜಿ ,ಯಮನಪ್ಪ ಪುರದ ,ಶ್ರೀಮತಿ ನಗೀನಾ ಬೇಗಂ, ವಿ. ಎಂ.ಕಂದಕೂರ, ಶರಣಬಸವರಾಜ ಮಾಟೂರ, ಶಿವನಗೌಡ ಜಾಲಿಹಾಳ , ರೂಪಾ ದೊಡ್ಡಮನಿ, ಬಸವರಾಜ ತೊಂಡಿಹಾಳ, ಬಸವರಾಜ ಪಿ. ನಾರಾಯಣಪ್ಪ ಹೆಚ್, ಮಂಜುನಾಥ ಎನ್.ಜೆ., ಮೌನೇಶ್ ದಾಸರ್, ಜಗದೀಶ ಬಳಿಗಾರ, ಬಸವರಾಜ ಮಠ, ಹನುಮೇಶ, ಮೀನಾಕ್ಷಿ ದೊಡ್ಡಮನಿ, ಶೇಖರಪ್ಪ .ಹೆಚ್ , ಸಿದ್ದಪ್ಪ ಅಮರಪ್ಪ, ಹನುಮೇಶ ಭೀಮಶೇನರಾವ್, ಹುಚ್ಚವ್ವ ಕೊಟ್ರಪ್ಪ, ಅಂಜಮ್ಮ, ಸಂಜನಾ ಮೂರ್ತಿ, ಶಿವಪುತ್ರಪ್ಪ ಗುಳೇದ, ಶೇಖರಗೌಡ ಮಾಲಿಪಾಟೀಲ್, ಹನುಮವ್ವ ಗಾಡಗೋಳಿ, ಪದ್ಮರಾಜ ದೇಸಾಯಿ, ಶೋಭಾ ಮಡ್ಡಿಮನಿ, ಚಿನ್ನುಭಾಷಾ ಅತ್ತಾರ , ಸಂಗಯ್ಯ ಹಿರೇಮಠ, ಬಸನಗೌಡ ಪೊಲೀಸ್ ಪಾಟೀಲ್, ದೊಡ್ಡನಗೌಡ ಪಾಟೀಲ, ಎಸ್ ವೆಂಕಟೇಶ,ಬಸಮ್ಮ ಬಳ್ಳಾರಿ, ಉಮಾ ಮಹೇಶ್ವರಿ, ಕೆ.ಜಿ.ಉಮೇಶ, ರೇಣುಕಾ ಪಾನಗಂಟಿ , ಆಶಾ ಲಮಾಣಿ, ಹೇಮಲತಾ ಬಿ, ವಿಜಯಲಕ್ಷ್ಮಿ ಕೊಪ್ಪಳ, ರಜಿಯಾ ಬೇಗಂ,ಸವಿತಾ ಜಾಣ, ಯಮ್ಮೀಮಾಲ್ ಎಂ, ಹನುಮಪ್ಪ ಭಜಂತ್ರಿ, ಶಿವಪ್ಪ .ಡಿ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಹನುಮಂತ ಮಡಿವಾಳರ, ಮಹಾಂತೇಶ ಇಂಗಳದಾಳ ಭಾಗವಹಿಸಿದ್ದರು.
- ಬಸವರಾಜ ಬಳಿಗಾರ
