
ಬಳ್ಳಾರಿ / ಕಂಪ್ಲಿ : ಶಿವಶರಣೆ ಅಕ್ಕ ಮಹಾದೇವಿ ಜಯಂತಿ ಅಂಗವಾಗಿ ಅಕ್ಕಮಹಾದೇವಿ ಮಹಿಳಾ ಮಂಡಳಿಯವರು ಶನಿವಾರ ಪಟ್ಟಣದಲ್ಲಿ ಅಕ್ಕನ ಭಾವಚಿತ್ರ ಮೆರವಣಿಗೆ ನಡೆಸಿದರು.
ಸಾಂಗತ್ರಯ ಸಂಸ್ಕೃತ ಪಾಠ ಶಾಲೆಯಿಂದ ಆರಂಭಗೊಂಡ ಮೆರವಣಿಗೆ ಡಾ. ರಾಜ್‌ಕುಮಾರ್ ಮುಖ್ಯರಸ್ತೆ ಮೂಲಕ ಸಾಗಿ ಪುನಃ ಪಾಠ ಶಾಲೆ ತಲುಪಿತು. ಮೆರವಣಿಗೆಯಲ್ಲಿ ಕಳಸ ಕನ್ನಡಿ ಹಿಡಿದ ಸುಮಂಗಲಿಯರು, ಭಜನಾ ಮಂಡಲಿ, ಮಂಗಲವಾದ್ಯಗಳು ಪಾಲ್ಗೊಂಡಿದ್ದವು.
ನಂತರ ಪಾಠ ಶಾಲೆಯಲ್ಲಿರುವ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಅಕ್ಕನ ನಾಮಕರಣ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಜಯಂತಿ ಅಂಗವಾಗಿ ಅಕ್ಕ ಮಹಾದೇವಿ ದೇವಸ್ಥಾನದಲ್ಲಿ ಅಕ್ಕನ ಶಿಲಾಮೂರ್ತಿಗೆ ವಿಶೇಷ ರುದ್ರಾಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಅಕ್ಕ ಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷರು ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ವೀರಶೈವ ಸಮಾಜದ ಗುರು ಹಿರಿಯರು, ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ, ಕೂಲಿಕಟ್ಟೆ ಬಸವೇಶ್ವರ ದೇವಸ್ಥಾನ ಸಮಿತಿ, ವೀರಶೈವ ಸಂಘ ಸಮಿತಿ, ವೀರಶೈವ ತರುಣ ಸಂಘಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
