ಬಳ್ಳಾರಿ / ಕಂಪ್ಲಿ : ಕಂಪ್ಲಿ ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದ ಉಚಿತ ಕಣ್ಣಿನ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವುದಾಗಿ ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.
ಅವರು ಬುಧವಾರ ಕಂಪ್ಲಿ ಪಟ್ಟಣದ ಕುರುಗೋಡು ರಸ್ತೆಯಲ್ಲಿ ಪಟ್ಟಣದ ಪೋಲೂರು ನಾರಯಣಪ್ಪ ಕುಟುಂಬದವರು ಹಾಗೂ ಪೋಲೂರು ಸತ್ಯನಾರಾಯಣ ಅವರು 17 ಸೆಂಟ್ಸ್ ಜಮೀನನ್ನು ದಾನವಾಗಿ ನೀಡಿದ್ದು, ಈ ಜಮೀನಿನಲ್ಲಿ ಚಿಕ್ಕೇನಕೊಪ್ಪ ಚನ್ನವೀರ ಮಹಾಸ್ವಾಮಿಗಳ ಬಳಗದವರು ನಿರ್ಮಿಸಲಿರುವ ಉಚಿತ ಕಣ್ಣಾಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿ ಶರಣರ ಬಳಗದವರು ಕಂಪ್ಲಿ ಪಟ್ಟಣದಲ್ಲಿ ನಿರಂತರವಾಗಿ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರವನ್ನು ನಡೆಸುತ್ತಿರುವುದು ವರದಾನವಾಗಿದೆ ಅದೊಂದು ಆಶ್ರಯವಾಗಿದ್ದು, ಇದೀಗ ಪಟ್ಟಣದಲ್ಲಿ ನಿರಂತರವಾಗಿ ಉಚಿತ ನೇತ್ರ ಚಿಕಿತ್ಸೆ ನಡೆಸಬೇಕೆನ್ನುವ ನಿಟ್ಟಿನಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಉತ್ತಮ ಪ್ರಯತ್ನವಾಗಿದೆ. ಈ ಉಚಿತ ಕಣ್ಣಾಸ್ಪತ್ರೆಗೆ ಅಗತ್ಯ ಇರುವ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಹಾಗೂ ವಿವಿಧ ಕಾರ್ಖಾನೆಗಳೊಂದಿಗೆ ಚರ್ಚಿಸಿ ಸೂಕ್ತ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು.
ಚಿಕ್ಕೇನಕೊಪ್ಪ ಚೆನ್ನವೀರ ಮಹಾಸ್ವಾಮಿಗಳ ಬಳಗದ ಕಾರ್ಯದರ್ಶಿ ಡಾ. ಜಂಬುನಾಥ್ ಗೌಡ ಮಾತನಾಡಿ ಇದುವರೆಗೂ ಕಂಪ್ಲಿ ಪಟ್ಟಣದಲ್ಲಿ 25ಸೇರಿದಂತೆ 30ಕ್ಕೂ ಅಧಿಕ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ 6 ಸಾವಿರಕ್ಕೂ ಅಧಿಕ ಜನರಿಗೆ ಬೆಳಕನ್ನು ನಮ್ಮ ಬಳಗ ನೀಡಿದೆ. ಪಟ್ಟಣದ ರೈತ ಕುಟುಂಬವಾದ ಪೋಲುರು ನಾರಾಯಣಪ್ಪ ಮತ್ತು ಕುಟುಂಬದವರು 17 ಸೆಂಟ್ಸ್ ಜಮೀನನ್ನು ದಾನವಾಗಿ ನೀಡಿದ್ದು, ಅನುಕೂಲವಾಗಿದೆ. ದಾನಿಗಳು, ಸ್ನೇಹಿತರ ಕೈಜೋಡಿಸಿದರೆ ಇನ್ನೊಂದು ವರ್ಷದಲ್ಲಿ ಪಟ್ಟಣದಲ್ಲಿ ಅತ್ಯಾಧುನಿಕ ನೇತ್ರ ಶಸ್ತ್ರ ಚಿಕಿತ್ಸಾ ಆಸ್ಪತ್ರೆಯನ್ನು 2.5.ಕೋ.ರೂಗಳ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಸುಮಾರು 58 ಲಕ್ಷರೂಗಳ ಯಂತ್ರಗಳನ್ನು ಅಳವಡಿಸಿ ಆಸ್ಪತ್ರೆಯನ್ನು ಆರಂಭಿಸಿ ಉಚಿತ ಸೇವೆಯನ್ನು ನೀಡಲಾಗುವುದು ಎಂದರು.
ನಂತರ ಜಮೀನಿನ ದಾನಿಗಳಾದ ಪೋಲೂರು ಪಿ.ಸತ್ಯನಾರಾಯಣ, ಶಾಸಕರಾದ ಜೆ.ಎನ್.ಗಣೇಶ್, ಕೆಶ್ರೀನಿವಾಸರಾವ್, ಡಾ.ಜಂಬುನಾಥ್ ಗೌಡ ಅವರನ್ನು ಬಳಗದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವರದಿ : ಜಿಲಾನಸಾಬ್ ಬಡಿಗೇರ್.
