೧ ”.ಜೀವನ ಮೌಲ್ಯ”
ತಾಯಿ ಇಲ್ಲದ ಮನೆ, ತಂದೆ ಇರದ ಬದುಕು.
ನೆರೆ ಇಲ್ಲದ ಜೀವನ, ಗುರುವಿಲ್ಲದ ಶಿಕ್ಷಣ.
ಬಂಧು-ಬಳಗ ವಿರದ ಈ ಬದುಕು ವ್ರ‍್ಥ ಗುರು ಕುಂಬಾರ ಗುಂಡಯ್ಯ.
೨. “ಜಾತ್ರೆ”
ಯಾತ್ರೆಗೆ ಕಾಶಿ, ಭಕ್ತಿಗೆ ಧರ್ಮಸ್ಥಳ.
ಶಕ್ತಿಗೆ ಶೃಂಗೇರಿ, ಮುಕ್ತಿಗೆ ಜಗನ್ನಾಥ ಪುರಿ ಪೀಠ.
ಜಾತ್ರೆಗೆ ಕೊಪ್ಪಳದ ಗವಿಮಠದ ಜಾತ್ರೆ ಶ್ರೇಷ್ಠವೆಂದ ಕುಂಬಾರ ಗುಂಡಯ್ಯ.
೩. “ಮೌನ”
ಮೌನವೆಂಬುವುದು ದೌರ್ಬಲ್ಯವೆಂದು ತಿಳಿಯಬೇಡಿ,
ಬುದ್ಧಿವಂತ ಜನರು ದೊಡ್ಡ ದೊಡ್ಡ ಹೆಜ್ಜೆಗಳನ್ನು,
ಮೌನದಿಂದಲೇ ಮಾಡುತ್ತಾರೆ. ನೋಡ ಕುಂಬಾರ ಗುಂಡಯ್ಯ.
೪. “ದೇವರು”
ಧರ್ಮ ಶುದ್ದಿ ಇಲ್ಲದವನು, ಧರ್ಮಸ್ಥಳಕ್ಕೆ ಹೋದರೇನು?
ಶಾಂತಿ ಇಲ್ಲದವನು, ಶಬರಿಮಲೆಗೆ ಹೋದರೇನು?
ತಿರುಚಿ ಮಾತನಾಡುವವ ತಿರುಪತಿಗೆ ಹೋದರೇನು?
ಅಜ್ಞಾನಿ ಶ್ರೀಶೈಲ ಯಾತ್ರೆಗೆ ಹೋದರೇನು?
ಮನದೊಳಗೆ ಮರ್ಕಟ ತುಂಬಿ, ಅರಿಷಟ್ ವರ್ಗ ಭಾಧಿಸಲು, ಕುಂಬಾರ ಗುಂಡಯ್ಯನ ನೆನೆಯದೆ ಅನ್ಯ ದೇವರುಗಳ
ಸುತ್ತುವರನ್ನು ಮೆಚ್ಚಲಾರನು ನೋಡ.
೫.”ಗುರು”
ಗುರುವಿನಿಂದಲೇ ದೀಕ್ಷೆ, ಗುರುವಿನಿಂದಲೇ ಮುಕ್ತಿ.
ಗುರುವಿನಿಂದಲೇ ಭಕ್ತಿ, ಗುರುವಿನಿಂದಲೇ ಶಕ್ತಿ.
ಗುರುವೇ ಲೋಕಕ್ಕೆ ಹಾದಿ ನೋಡ ಗುರು ಕುಂಬಾರ ಗುಂಡಯ್ಯ.
೬. “ನೈಜತೆ”
ಸುಳ್ಳು ಹೇಳಿ ಮೋಸ ಮಾಡಿ ವಂಚನೆ ಮಾಡುವುದಕ್ಕಿಂತ,
ಸತ್ಯವಂತನ ಹಾಗೆ ನಟಿಸಿ ನಂಬಿಸುವುದಕ್ಕಿಂತ, ನೀ ಇದ್ದ ಹಾಗೆಯೇ ನೈಜತೆಯಿಂದ ಇದ್ದುಬಿಡು, ಗುರು ಕುಂಬಾರ
ಗುಂಡಯ್ಯ ಮೆಚ್ಚುವ ಹಾಗೆ.
೭.”ಜಯ”
ಹೊಗಳುವರು, ತೆಗಳುವರು, ನೋಡುವರು, ನೋಡದೆ ಹೋಗುವರು, ಮಾತನಾಡಿಸುವರು, ಮೌನದಲ್ಲೇ ಸಮ್ಮತಿಸುವರು,
ಬಿಡಬೇಡ ನೀ ಮಾಡುವ ಕಾರ್ಯ ಜೈಸುವತನಕ, ನಗುವವರೆ, ಮುಂದೆ ನಿನ್ನ ಬೆನ್ನ ಹಿಂದೆ ಜನ ಸಾಗರ ನೋಡ ಕುಂಬಾರ
ಗುಂಡಯ್ಯ.
೮.” ಗೌರವ”
ತುಳಿದು ಬದುಕುವವರ ಮುಂದೆ ತಿಳಿದು ಬದುಕು. ಅಳೆದು ಬದುಕುವವರ ಮುಂದೆ ಬೆಳೆದು ಬದುಕು, ಪ್ರೀತಿಸುವವರ ಮುಂದೆ
ಗೌರವಿಸಿ ಬದುಕೆಂದ, ನಮ್ಮ ಕುಂಬಾರ ಗುಂಡಯ್ಯ.
೯. “ಜಗಳ”
ಅಜ್ಞಾನಿಯ ಜೊತೆಗೆ, ಅಧಿಕ ಸ್ನೇಹಕ್ಕಿಂತ, ಸುಜ್ಞಾನಿಯ ಜೊತೆಗೆ ಜಗಳವೇ ಲೇಸಂದ ನಮ್ಮ ಕುಂಬಾರ ಗುಂಡಯ್ಯ.
೧೦. “ಜಗದ ಮೂಲ”
ಗುಂಡಯ್ಯ ಬಲ್ಲ ಗುರುವಿನ ಮೂಲ.
ಗುಂಡಯ್ಯ ಬಲ್ಲ ಲಿಂಗದ ಮೂಲ.
ಗುಂಡಯ್ಯ ಬಲ್ಲ ಜಂಗಮದ ಮೂಲ.
ಗುರು,ಲಿಂಗ, ಜಂಗಮವಿಲ್ಲದೆ, ಜಗದ ಮೂಲ ಇಲ್ಲ ನೋಡ ಕುಂಬಾರ ಗುಂಡಯ್ಯ.
– ಶೇಖರಪ್ಪ ಕಂದಕೂರ, ಕನ್ನಡ ಉಪನ್ಯಾಸಕರು.
ಎಂ. ಎಂ. ಡಿ. ಆರ್. ಎಸ್. ವಸತಿ ಶಾಲೆ, ಕುಕನೂರು.
