ಕಲಬುರಗಿ: ಬೀದರ್ ಹಾಗೂ ಶಿವಮೊಗ್ಗದಲ್ಲಿ ಪರೀಕ್ಷಾ ಸಂದರ್ಭದಲ್ಲಿ ಜನಿವಾರ ತೆಗೆಸುವುದು ಮತ್ತು ಜನಿವಾರ ಕತ್ತರಿಸಿ ಪರೀಕ್ಷೆಗೆ ಕೂರಿಸಲು ಮುಂದಾದ ಕ್ರಮ ಖಂಡನೀಯ ಇದು ಹಿಂದುತ್ವವನ್ನು ಅಳಿಸಿ ಹಾಕುವ ಮುನ್ಸೂಚನೆ ಎಂದು ಮಹಾಗಾಂವ ಭಾ.ಜ.ಪ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಆರೋಪಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ರಾಜ್ಯ ಸರ್ಕಾರ ಹಿಂದುತ್ವದ ವಿರೋಧಿಯಾಗಿದೆ, ಇಡೀ ವಿಶ್ವದಲ್ಲಿಯೇ ಹಿಂದೂ ರಾಷ್ಟ್ರ ನಮ್ಮ ಭಾರತ ಮಾತ್ರ. ಇಲ್ಲಿ ನಮ್ಮದೇ ಆಚರಣೆ ಸಂಪ್ರದಾಯ ಸಂಸ್ಕೃತಿ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗದ ರೀತಿ ಭಯದ ವಾತಾವರಣ ಮೂಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಜನಿವಾರ, ಶಿವದಾರಗಳು ಧಾರ್ಮಿಕ ನಂಬಿಕೆಯನ್ನು ಹೊಂದಿವೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ತುಘಲಕ್ ಸರ್ಕಾರದ ಹಿಂದೂ ವಿರೋಧಿ ಧೋರಣೆಯಿಂದಾಗಿ ಈ ರೀತಿಯ ಘಟನೆ ನಡೆಯುತ್ತಿವೆ. ಜನಿವಾರ ಕತ್ತರಿಸಿದವರು, ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರ ಮನೋಭಾವ ಒಂದೇ ಎಂಬುದನ್ನು ಘಟನೆ ತೋರಿಸುತ್ತದೆ. ಸರ್ಕಾರದ ಸೂಚನೆ ಇಲ್ಲದೆ ಇದೆಲ್ಲಾ ನಡೆಯಿತೇ, ಘಟನೆ ನಡೆದಿದ್ದು ಯಾಕೆಂಬುದರ ಸಮಗ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು. ಅನ್ಯಾಯಕ್ಕೆ ಒಳಗಾಗಿರುವ ವಿದ್ಯಾರ್ಥಿಗೆ ಸರ್ಕಾರ ಆತ ಬಯಸಿದ ಕಾಲೇಜಿನಲ್ಲಿ ಸರ್ಕಾರಿ ಸೀಟ್ ನೀಡಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.
ಜನಿವಾರ ಇದು ಕೇವಲ ಬ್ರಾಹ್ಮಣರಿಗೆ ಸಂಬಂಧಿಸಿದಲ್ಲ, ಇದೊಂದು ಹಿಂದುತ್ವದ ಸಂಕೇತ ಎಂದರು ತಪ್ಪಾಗಲಾರದು, ವಿಶ್ವಕರ್ಮ ಮರಾಠ ಸೇರಿದಂತೆ ಇನ್ನಿತರ ಸಮುದಾಯದವರು ಸಹ ಜನಿವಾರ ಧರಿಸುತ್ತಾರೆ. ಹೀಗಾಗಿ ಜನಿವಾರ ತೆಗೆಸಲು ಮುಂದಾದ ಹಿಂದೂ ವಿರೋಧಿಗಳು ಯಾರು ಎಂಬುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮುಂದೆ ಎಂದು ಈತರ ಆಗದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ವಿದ್ಯಾರ್ಥಿಗಳಿಗೆ ಜನಿವಾರ ತೆಗೆದು ಪರೀಕ್ಷೆ ತೋರಿಸಲು ಮುಂದಾಗಿರುವುದು ಖಂಡನೀಯ. ಅಂತಹವರ ವಿರುದ್ಧ ಶಿಸ್ತು ಕ್ರಮವಾಗಬೇಕು ಇದರಲ್ಲಿ ಕಾಣದ ಕೈಗಳ ಕೈವಾಡವಿದ್ದು ಕೂಲಂಕುಶವಾಗಿ ಪರಿಗಣಿಸಿ ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
- ಕರುನಾಡ ಕಂದ
