
ಬೆಂಗಳೂರು : ಪ್ರಾಥಮಿಕ ಶಾಲಾ ವೃಂದದಿಂದ ಪ್ರೌಢ ಶಾಲಾ ಸಹ ಶಿಕ್ಷಕರ ಗ್ರೇಡ್-2 ವೃಂದಕ್ಕೆ ಮುಂಬಡ್ತಿ ನೀಡುವ ಕುರಿತು ನಿರ್ದೇಶಕರು (ಪ್ರೌಢ ಶಿಕ್ಷಣ) ಟಿಪ್ಪಣಿಯೊಂದನ್ನು ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿತವಾದ 2024ರ ವೃಂದ ಮತ್ತು ನೇಮಕಾತಿ ನಿಯಮದ ಸರ್ಕಾರದ ಆದೇಶವನ್ನು ಉಲ್ಲೇಖಿಸಿದ್ದಾರೆ. ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ ವಿಭಾಗ ಇವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿಯ ದಿನಾಂಕ 16/4/2025 ಮತ್ತು ದಿನಾಂಕ 8/4/2025ರ ಪತ್ರವನ್ನು ಈ ಟಿಪ್ಪಣಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್- 2 ಹುದ್ದೆಗೆ ಬಡ್ತಿ ನೀಡುವ ಕುರಿತು ರಾಜ್ಯ ಪತ್ರದಲ್ಲಿ ಪ್ರಕಟಿತವಾದ ವೃಂದ ಮತ್ತು ನೇಮಕಾತಿ ನಿಯಮದಂತೆ ಸರ್ಕಾರಿ ಪ್ರಾಥಮಿಕ ಶಾಲಾ ವೃಂದದ ಶಿಕ್ಷಕರಿಂದ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ನೀಡುವ ಕುರಿತು ಕಲಬುರಗಿ ವಿಭಾಗದ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರುಗಳಿಗೆ ವೇಳಾ ಪಟ್ಟಿಯೊಂದಿಗೆ ಬಡ್ತಿಗೆ ಕ್ರಮವಹಿಸಲು ಸೂಚಿಸಿರುತ್ತೀರಿ ಎಂದು ತಿಳಿಸಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 6 ರಿಂದ 8 ನೇ ತರಗತಿ ಪದವೀಧರ ಶಿಕ್ಷಕರಿಗೆ ಪ್ರೌಢ ಶಾಲಾ ಶಿಕ್ಷಕರು ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಕುರಿತು ಮಾನ್ಯ ಕೆಎಟಿ ಅರ್ಜಿ ಸಂಖ್ಯೆ 3443- 3503/2020 ಮತ್ತು 857-917/2021 ಗಳಲ್ಲಿ ನಾರಾಯಣ ಬಾಳಪ್ಪಾ ಮತ್ತಿತರರು ದಾಖಲಿಸಿದ ದಾವೆಗೆ ಘನ ನ್ಯಾಯಾಲಯವು ದಿನಾಂಕ 12-05-2021ರಂದು ತೀರ್ಪು ನೀಡಿದ್ದು, ಸದರಿ ತೀರ್ಪಿನಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ನೀಡಿರುವ ಬಡ್ತಿಗಳನ್ನು ಹಿಂಪಡೆಯಲು ಸೂಚಿಸಿರುತ್ತದೆ ಎಂದು ಹೇಳಿದ್ದಾರೆ.
ಆದ್ದರಿಂದ ಈ ತೀರ್ಪು ಆದ ನಂತರ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯಿಂದ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವುದನ್ನು ತಡೆಹಿಡಿಯಲು ಈ ಕಛೇರಿಯಿಂದ ಸೂಚಿಸಲಾಗಿದೆ. ಸರ್ಕಾರದ ಅನುಮತಿಯಂತೆ ಮಾನ್ಯ ಕೆಎಟಿ ಅರ್ಜಿ ಸಂಖ್ಯೆ 3443-3503/2020 ಮತ್ತು 857-917/2021 ಗಳ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಮಾನ್ಯ ನ್ಯಾಯಾಲಯವು ದಿನಾಂಕ 31-08-2024 ರಲ್ಲಿ ತೀರ್ಪು ನೀಡಿರುತ್ತದೆ.
ಸದರಿ ತೀರ್ಪಿನಲ್ಲಿ 2016ರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ನಿಯಮಗಳು ಅಂತಿಮಗೊಂಡ ನಂತರ ಸರ್ಕಾರದ ಹಂತದಲ್ಲಿ ಈಗಾಗಲೇ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ನೀಡಿರುವ ಬಡ್ತಿಗಳನ್ನು ಕೆಎಟಿ ಆದೇಶದಂತೆ ಹಿಂಪಡೆಯುವ ಕುರಿತು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲು ಆದೇಶಿಸಿರುತ್ತದೆ ಎಂದು ತಿಳಿಸಿದ್ದಾರೆ.
ದಿನಾಂಕ 27-03-2025 ರಂದು 2016ರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗಳನ್ನು ಸಕಾರದಿಂದ ಹೊರಡಿಸಲಾಗಿದೆ. ಸದರಿ ಆದೇಶವು ರಾಜ್ಯ ಪತ್ರದಲ್ಲಿ ದಿನಾಂಕ 28-03-2025 ರಂದು ಪ್ರಕಟಿತವಾಗಿರುತ್ತದೆ. ಸದರಿ ತಿದ್ದುಪಡಿ ನಿಯಮಗಳನ್ನು ಮಾನ್ಯ ಕೆ.ಎಸ್.ಎ.ಟಿ. ಬೆಂಗಳೂರು, ಇಲ್ಲಿ ನಿಂದನಾ ದಾವೆ CTA ರಲ್ಲಿ ಮಾನ್ಯ ನ್ಯಾಯಾಲಯಕ್ಕೆ compliance affidavit ಮೂಲಕ ದಿನಾಂಕ 28-03-2025ರಂದು ಸಲ್ಲಿಸಲಾಗಿದೆ. ಸದರಿ ವಿಷಯ ಕುರಿತು ಆಲಿಕೆಯನ್ನು ಮಾನ್ಯ ನ್ಯಾಯಾಲಯವು ದಿನಾಂಕ 25-04-2025 ರಂದು ನಿಗದಿಪಡಿಸಿರುತ್ತದೆ.
ಈ ಮೇಲಿನ ಅಂಶಗಳಂತೆ ಪ್ರಸ್ತುತ ಅಂತಿಮ ತಿದ್ದುಪಡಿ ನಿಯಮಗಳು ಪ್ರಕಟಣೆಯಾಗಿದ್ದು, ಆದರೆ ತೀರ್ಪಿನ ಅಂಶದ ಕುರಿತು ಸರ್ಕಾರದಿಂದ ನಿರ್ದೇಶನ ಪಡೆದ ನಂತರ, ಸದರಿ ನಿರ್ದೇಶನದಂತೆ ಪ್ರೌಢ ಶಾಲಾ ಶಿಕ್ಷಕರು ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಕುರಿತು ಕ್ರಮ ವಹಿಸಬೇಕಿರುತ್ತದೆ.
ರಿಟ್ ಪಿಟಿಷನ್ ಅರ್ಜಿ ತೀರ್ಪಿನಂತೆ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಮಾರ್ಗದರ್ಶನ ಕೋರಿ ದಿನಾಂಕ 06-11-2024 ಮತ್ತು 16.04.2025 ರಂದು ಪತ್ರ ಬರೆಯಲಾಗಿದೆ. ದಿನಾಂಕ 28.03.2025 ರಂದು ಪ್ರಕಟಿತವಾದ ವೃಂದ ಮತ್ತು ನೇಮಕಾತಿ ನಿಯಮದಂತೆ ಪ್ರಾಥಮಿಕ ಶಾಲಾ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿಯ ಪ್ರಕ್ರಿಯೆಯನ್ನು ಸರ್ಕಾರದ ನಿರ್ದೇಶನ/ ಮಾರ್ಗದರ್ಶನ ಬಂದ ನಂತರ ಕ್ರಮವಹಿಸಬೇಕಾಗಿದೆ.
ಆದ್ದರಿಂದ ತಮ್ಮ ಕಛೇರಿಯಿಂದ ಹೊರಡಿಸಿರುವ ಬಡ್ತಿ ಪ್ರಕ್ರಿಯೆಯನ್ನು ಸರ್ಕಾರದ ಮಾರ್ಗದರ್ಶನ ಬರುವವರೆಗೂ ತಡೆಹಿಡಿಯಲು ಕೋರಿದೆ. ಮಾನ್ಯ ಆಯುಕ್ತರ ಆದೇಶದ ಮೇರೆಗೆ ಎಂದು ಟಿಪ್ಪಣಿಯಲ್ಲಿ ತಿಳಿಸಿದೆ.
ವರದಿ : ಜಿಲಾನಸಾಬ್ ಬಡಿಗೇರ್.
