
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಗುಳೆ ಲಕ್ಕಮ್ಮ ಜಾತ್ರೆ ನಡೆಯಿತು. ಇಡೀ ಊರಿಗೆ ಊರೇ ಖಾಲಿಯಾಗುವ ಜಾತ್ರೆ ಇದು, ಗುಳೆ ಲಕ್ಕಮ್ಮ ಎಂಬ ದೇವತೆ ಊರಲ್ಲೆಲ್ಲಾ ಸುತ್ತುವ ಮುನ್ನವೇ ಇಡೀ ಊರಿನ ಜನ ತಮ್ಮ ದನಕರು, ನಾಯಿ, ಕುರಿ, ಕೋಳಿ ಏನೊಂದನ್ನೂ ಬಿಡದೆ, ತಮಗೆ ಬೇಕಾಗುವ ಎಲ್ಲಾ ವಸ್ತು, ಸಲಕರಣೆಗಳೊಂದಿಗೆ ಊರು ಬಿಟ್ಟು ಊರ ಹೊರಗೆ ಬೀಡು ಬಿಡುತ್ತಾರೆ. ನಂತರ ಗುಳೆ ಲಕ್ಕಮ್ಮ ದೇವತೆಯ ಮೆರವಣಿಗೆ ಇಡೀ ಊರನ್ನು ಸುತ್ತುತ್ತದೆ. ಊರಲ್ಲಿ ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡ ನಂತರ ಕೊನೆಯಲ್ಲಿ ದೇವತೆ ಊರನ್ನು ತೊರೆದು ಊರ ಹೊರಗೆ ತಾಂಡಾದಲ್ಲಿ ನೆಲೆಸುತ್ತದೆ. ಸಂಜೆ ಮತ್ತೆ ವಿಧಿ ವಿಧಾನಗಳೊಂದಿಗೆ ಮೊದಲು ದೇವತೆ ಊರನ್ನು ಪ್ರವೇಶಿಸಿದ ನಂತರ ದೇವತೆಯ ಹಿಂದೆ ಇಡೀ ಊರ ಜನ ಪಟ್ಟಣವನ್ನು ಪ್ರವೇಶಿಸುತ್ತಾರೆ. ಅಲ್ಲಿಯವರೆಗೂ ಕೂಡ್ಲಿಗಿ ಪಟ್ಟಣದಲ್ಲಿ ಒಂದೇ ಒಂದು ನರಪಿಳ್ಳೆಯೂ, ಸಾಕು ಪ್ರಾಣಿ, ಪಕ್ಷಿಗಳಿರುವುದಿಲ್ಲ. ಪೊಲೀಸ್ ಕಾವಲು ಮಾತ್ರ ಇರುತ್ತದೆ. ಇದು ಮೊದಲಿನಿಂದಲೂ 2-3 ವರ್ಷಗಳಿಗೊಮ್ಮೆ ನಡೆದು ಬಂದ ಪದ್ಧತಿಯಾಗಿದೆ. ವಿಶೇಷವೆಂದರೆ ಇಲ್ಲಿ ಯಾವುದೇ ಜಾತಿ, ಧರ್ಮಗಳ ಭೇದವಿಲ್ಲದಂತೆ ಎಲ್ಲರೂ ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
