ಕ್ಷಮಿಸಿ ಬಿಡಿ ಬಸವಣ್ಣ
ನಿಮ್ಮನ್ನು ಅರ್ಥಮಾಡಿಸುವುದರಲ್ಲಿ
ನಾವು ಸೋತು ಹೋದೆವು,
ನಾವು ಮರೆತು ಹೋದೆವು.
ನೀವು ಈಗಲೂ ಇರಬಯಸಿದರೆ
ಈ ಲೋಕ ಸುಮ್ಮನೆ ಬಿಡುವುದಿಲ್ಲ ನಿಮ್ಮನ್ನು,
ನಿಮ್ಮ ತ್ಯಾಗ, ಬಲಿದಾನ ನಮ್ಮ
ಶ್ರೇಯಸ್ಸಿಗೆ ಕಾರಣವಾಯಿತು ಹೊರತು, ನಿಮ್ಮ ತತ್ತ್ವ
ಸ್ಪೂರ್ತಿಯಾಗಲಿಲ್ಲ ಬಸವಣ್ಣ.
ಈ ವಿಶ್ವ ಅಂದು ಹೇಗೆ ಸಮಾನತೆ ಮತ್ತು ಪ್ರಭುತ್ವಕ್ಕಾಗಿ ಹೋರಾಡಿತ್ತೋ
ಇಂದು ಸ್ವಾರ್ಥ ಸ್ವ ಪ್ರಸಿದ್ಧಿಗಾಗಿ, ಹಾಹಾಕಾರ
ಪಡುತ್ತಿದ್ದಾರೆ ಈ ನಮ್ಮ ಸ್ವಾರ್ಥ ಜನ.
ನೀವಿದ್ದಿದ್ದರೆ ಇಂದು ನಾಲ್ಕಾಣೆಯ ಹಣದಾಸೆಗೆ ನಿಮ್ಮ ಮೌಲ್ಯಯುತ ಬದುಕಿನ
ವ್ಯಕ್ತಿತ್ವವನ್ನು ಹರಾಜು ಹಾಕುತ್ತಿದ್ದರು,
ನಮ್ಮ ಹೇಯ – ನೀಚ ಮನಸ್ಥಿತಿಯ ಮನುಷ್ಯರು,
ಇಲ್ಲಿ ಬಹಿರಂಗದಲ್ಲಿ ಒಂದು, ಅಂತರಂಗದಲ್ಲಿ ಇನ್ನೊಂದು, ಇವರೆ ಈ ಲೋಕದ ಉಧ್ಧಾರಕರೆಂದು ತಮಟೆ ಹೊಡೆಯುತ್ತಾರೆ ಮುಗ್ದ ಭಕ್ತರ ಮುಂದೆಲ್ಲಾ.
ನೀವು ಕೊಟ್ಟು ಹೋದ ವಚನ ಸಾಹಿತ್ಯ ಬಳಸಿಕೊಂಡು ಬೆಳೆಯುತ್ತಿದ್ದೇವೆಯೇ ಹೊರತು ನಿಮ್ಮ ವೈಜ್ಞಾನಿಕ ಮನೋಧರ್ಮದ, ವೈಚಾರಿಕ ನಿಲುವುಗಳನ್ನು ಜಗತ್ತಿಗೆ ಸಾರುವ ಕಾಯಕ ಮಾಡದೇ ಬರೀ ಬಡಾಯಿ ಕೊಚ್ಚಿ ಕೊಂಡು ಹೋಗುತ್ತಿದ್ದೇವೆ ನಾವು ಬಸವಣ್ಣ.
ಸತ್ಯಕಾಗಿ ಪ್ರಾಣ ನೀ ನೀಡಿದೆ ಅಂದು
ಆದರೆ ಇಂದು ನಮ್ಮ ಪ್ರತಿಷ್ಠೆಗಾಗಿ
ನಿಮ್ಮ ಪ್ರಾಣದ ಸತ್ವವನ್ನು ಹೀರಿಕೊಂಡು ಬದುಕುತ್ತೀದೇವೆ ನಾವು ಇಂದು ಬಸವಣ್ಣ.
ಕಲ್ಯಾಣ ಕ್ರಾಂತಿಯ ಕೆಚ್ಚೆದೆಯ ಹೋರಾಟ ನಡೆಸಿದ ನೀವು,
ಆದರೆ ನಿಮ್ಮನ್ನು ತೇಜೋವಧೆಯ ಮಾಡುವಲ್ಲಿ ಕಾಲ ಕಳೆಯುತ್ತಿದ್ದೇವೆ ಇಂದು ನಾವು ಬಸವಣ್ಣ.
ನಮಗಾಗಿ, ನಮ್ಮವರಿಗಾಗಿ ಪ್ರಾಣ ನೀಡಿದಿರಿ ಅಂದು ನೀವು,
ನಿಮ್ಮ ಹೆಸರಿನಲ್ಲಿ ಬಡಿದಾಡುತ್ತಿರುವೆವು ಇಂದು ನಾವು ಬಸವಣ್ಣ.
ಹೇಗಿದೆ ನೋಡಿ ಬಸವಣ್ಣ
ಈ ಯುಗದ ಕಾಲ,
ನಯವಂಚನೆ, ಮೋಸ, ಹಸಿ ಸುಳ್ಳು,
ಡೊಂಬರಾಟದ ಈ ಕಾಲ.
ಕ್ಷಮಿಸಿ ಬಿಡಿ ಬಸವಣ್ಣ
ಬರಿ ರಕ್ತ ಮಾಂಸ ತುಂಬಿದವರ ಮುಂದೆ
ಹೇಳಿದರೆ ಏನು ಪ್ರಯೋಜನ?
ಮಾನವೀಯ ಮೌಲ್ಯಗಳು ಇಲ್ಲದ
ಶರೀರಕ್ಕೆ ಹೇಳಿದರೇ ಏನು ಉಪಯೋಗ.
ಕ್ಷಮಿಸಿ ಬಿಡಿ ಬಸವಣ್ಣ ನಿಮ್ಮನ್ನು ಜಗಕ್ಕೇ ಅರ್ಥ ಮಾಡಿಸುವುದರಲ್ಲಿ ಸೋತಿದ್ದೇವೆ ನಾವು ಇಂದು.
ಕ್ಷಮಿಸಿ ಬಿಡಿ ಬಸವಣ್ಣ, ಬಸವಣ್ಣ

— ಸಂಗಮೇಶ ಎನ್. ಜವಾದಿ
