ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾ.ಪಂ ವ್ಯಾಪ್ತಿಯ ಸೋಮಲಾಪುರ ಗ್ರಾಮದಲ್ಲಿ ಕಳೆದ ದಿನದಂದು ಸುರಿದ ಅಕಾಲಿಕ ಆಲಿಕಲ್ಲು ಮಳೆ, ಗಾಳಿಗೆ ನೆಲಕಚ್ಚಿದ ರೈತರ ಭತ್ತದ ಹೊಲಗಳಿಗೆ ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜುನಾಯಕ ಭಾನುವಾರ ಭೇಟಿ ನೀಡಿ, ಪರಿಶೀಲಿಸುವ ಜತೆಗೆ ರೈತರಿಗೆ ಸಾಂತ್ವನ ಹೇಳಿದರು.
ಇಲ್ಲಿನ ಭಾಗದಲ್ಲಿ ಸುಮಾರು 200 ಎಕರೆಯಷ್ಟು ಭತ್ತ ಬೆಳೆಯು ನಾಶವಾಗಿದ್ದು, ರೈತರು ಸಾಲದ ಸುಳಿಗೆ ಸಿಲುಕುವಂತ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ರೈತರ ಸಂಕಷ್ಟವನ್ನು ಅರಿತು, ಪ್ರತಿ ಎಕರೆಗೆ ಸುಮಾರು 30ರಿಂದ 40 ಸಾವಿರ ರೂ. ನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸುವ ಜತೆಗೆ ಜೆಡಿಎಸ್ ಪಕ್ಷವು ರೈತರ ಬೆನ್ನೆಲುಬಾಗಿ ನಿಂತಿದ್ದು, ದೃತಿಗೆಡದೇ ಧೈರ್ಯದಿಂದಿರಬೇಕು ಎಂದು ರಾಜುನಾಯಕ ತಿಳಿಸಿದರು.
ಇಲ್ಲಿನ ರೈತರ ಹೊಲಗಳಿಗೆ ಭೇಟಿ ನೀಡಿ, ಸಂಕಷ್ಟವನ್ನು ಆಲಿಸಿ, ಬೆಳೆ ನಷ್ಟ ಪರಿಹಾರದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಮಿನಳಿ ತಾಯಣ್ಣ, ಕಂಪ್ಲಿ ತಾಲೂಕ ಅಧ್ಯಕ್ಷ ಮೇಘರಾಜ್, ಪ್ರಧಾನ ಕಾರ್ಯದರ್ಶಿ ಜಗದೀಶ್, ನಾಗರಾಜ್, ವಿರುಪಾಕ್ಷಿ, ರೈತರಾದ ರುದ್ರಪ್ಪ, ಶಿವಪ್ಪ, ಹನುಮಂತಪ್ಪ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
