ಶಿವಮೊಗ್ಗ: ನಾನು ಯಾರದೋ ಕೃಪೆಯಿಂದ ಎಂ.ಎಲ್.ಸಿ ಆದವನಲ್ಲ! ಜನರ ಭರವಸೆಯಿಂದ, ವಿಶ್ವಾಸದಿಂದ, ಅವರು ನನಗೆ ನೀಡಿದ ಮತಗಳ ಪವಿತ್ರತೆಯಿಂದ ನಾನು ಈ ಸ್ಥಾನಕ್ಕೆ ಶಾಸಕ (ಎಂ.ಎಲ್.ಎ) ಆಗಿ ಬಂದಿರುವುದು ಎಂದು ಶಿವಮೊಗ್ಗ ಶಾಸಕ ಶ್ರೀ ಎಸ್ ಎನ್ ಚನ್ನಬಸಪ್ಪ ಅವರು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತಮ್ಮ ವಿರುದ್ಧ ಧ್ವನಿ ಎತ್ತಿದ ಕಾಂಗ್ರೆಸ್ ಪ್ರತಿನಿಧಿಗಳಿಗೆ ಒತ್ತಿ ಹೇಳಿದರು.
ಸಭೆಯಲ್ಲಿ ನಡೆದ ಘಟನೆ ಜನಪ್ರತಿನಿಧಿಗಳ ಪ್ರತಿಷ್ಠೆಗೆ ಧಕ್ಕೆ ತರುವಂತದ್ದು. ಸಭೆಯಲ್ಲಿ ಭಾಗವಹಿಸಿದ್ದ ಜ್ಞಾನದ ಕೊರತೆ ಇರುವಂತಹ ಎಂ.ಎಲ್.ಸಿ ಶ್ರೀಮತಿ ಬಲ್ಕೀಶ್ ಬಾನು ಅವರು, ಚುನಾವಣೆಯ ಮೂಲಕ ಆಯ್ಕೆಯಾಗಿರುವ ಜನಪ್ರತಿನಿಧಿಗೆ ತೋರಿದ ಅಗೌರವ ದುರದೃಷ್ಟಕರ. ಇದು ಕೇವಲ ವೈಯಕ್ತಿಕ ಸ್ತರದ ಪ್ರಶ್ನೆಯಲ್ಲ, ಇದು ಪ್ರಜಾಪ್ರಭುತ್ವದ ಗೌರವವನ್ನೇ ಕುಗ್ಗಿಸುವ ಪ್ರಯತ್ನವಾಗಿದೆ.
ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮಾವಳಿಯ ನಿಯಮ 348ರ ಪ್ರಕಾರ 6 ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತುಗೊಳಿಸಲಾಗಿದೆ. ಆದರೆ ಈ ನಿಯಮಗಳ ಬಗ್ಗೆ ಪೂರ್ಣ ಜ್ಞಾನವಿಲ್ಲದ ಸ್ಥಿತಿಯಲ್ಲಿ, ಬಲ್ಕೀಶ್ ಬಾನು ಮಾತನಾಡುವುದು, ಓರ್ವ ಚುನಾಯಿತ ಪ್ರತಿನಿಧಿಯ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ! ಜೊತೆಗೆ ಇದಕ್ಕೆ ಕುಮ್ಮಕ್ಕು ನೀಡಿರುವ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಶ್ರೀ ಬೇಳೂರು ಗೋಪಾಲಕೃಷ್ಣ ಅವರದ್ದು ಮೂರ್ಖತನದ ಪರಮಾವಧಿಯಾಗಿದೆ.
ಪ್ರತಿನಿಧಿತ್ವ ಎನ್ನುವುದು ಕೇವಲ ಸ್ಥಾನ ಅಥವಾ ಅಧಿಕಾರವಲ್ಲ; ಅದು ಜನರ ಆಶಯಗಳ ಪ್ರತಿಬಿಂಬವಾಗಿದೆ. ಎಲ್ಲಿ ಒಂದು ಚುನಾವಣೆಯ ಮೂಲಕ ಆಯ್ಕೆಯಾದ ಪ್ರತಿನಿಧಿಯನ್ನು ನಿರ್ಲಕ್ಷಿಸಲಾಗುತ್ತದೋ, ಅಲ್ಲಿಗೆ ಪ್ರಜಾಪ್ರಭುತ್ವದ ಮೌಲ್ಯಗಳು ನಿರ್ಲಕ್ಷಿಸಿದಂತೆ. ಇಂತಹ ಸಾಮಾನ್ಯ ಜ್ಞಾನವಿಲ್ಲದ ಹೇಳಿಕೆಗಳು ತಡೆ ಇಲ್ಲದೆ ಬಿಡುವಂತಿಲ್ಲ. ಜನಪ್ರತಿನಿಧಿಗಳ ಸ್ಥಾನಮಾನ ಹಾಗೂ ಪ್ರಜಾಪ್ರಭುತ್ವದ ಗೌರವ ಉಳಿಸಿಕೊಳ್ಳುವುದು ನನ್ನ ಮತ್ತು ಎಲ್ಲರ ಕರ್ತವ್ಯ ಆಗಿದೆ ಎಂದು ಅವರು ಸಭೆಯಲ್ಲಿ ಮನವರಿಕೆ ನಡೆಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.
