ಬಳ್ಳಾರಿ/ ಕಂಪ್ಲಿ : ಶ್ರಮಿಕ ವರ್ಗವೇ ಪ್ರಸ್ತುತ ದೇಶದ ಸಂಪತ್ತು. ರಕ್ತದ ಜತೆ ಶ್ರಮ ಬೆರೆಸಿ ದೊಡ್ಡ ಕಟ್ಟಡ, ಅಣೆಕಟ್ಟು, ಕೆರೆಗಳನ್ನು ಕಟ್ಟಿದ್ದಾರೆ. ಶ್ರಮಿಕರಿಗೆ ಸರ್ಕಾರದಿಂದ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಅಧ್ಯಕ್ಷ ಹೊನ್ನೂರಸಾಬ್ ಹೇಳಿದರು.
ಸ್ಥಳೀಯ ಅತಿಥಿ ಗೃಹದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ, ಕಾರ್ಮಿಕರಿಗೆ ಸಚಿವರಿಗೆ ಶ್ರಮಿಕರ ಕಾಳಜಿ ಇಲ್ಲದಂತಾಗಿದೆ. ಬಡತನದಲ್ಲಿ ಜೀವನ ನಡೆಸುತ್ತಿರುವ ಕಾರ್ಮಿಕರಿಗೆ ನಿವೇಶನ ನೀಡಬೇಕು. ಕಾರ್ಮಿಕರ ಮಕ್ಕಳ ವಿವಾಹಕ್ಕೆ ಧನಸಹಾಯ ನೀಡಬೇಕು. ಶಿಕ್ಷಣ, ಆರೋಗ್ಯ ಸೇರಿದಂತೆ ನಾನಾ ವಿಧಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಕಾರ್ಮಿಕರಿಗೆ ಕಲ್ಪಿಸಬೇಕು. ಕಾರ್ಮಿಕರ ಶ್ರಮದಿಂದ ದೇಶದ ಪ್ರಗತಿ ಸಾಧ್ಯವಿದ್ದು, ಕಾರ್ಮಿಕರು ನಿತ್ಯ ದುಡಿಮೆ ಮಾಡುವ ಮೂಲಕ ಸಮೃದ್ಧ ದೇಶವನ್ನು ಕಟ್ಟುತ್ತಿದ್ದಾರೆ. ಅವರ ಶ್ರಮ ಸಾರ್ಥಕವಾಗಿದ್ದು ಅದನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಆರ್.ನಾಗರಾಜ, ಪದಾಧಿಕಾರಿಗಳಾದ ಜಾಫರ್, ಟೈಲ್ಸ್ ಭಾಷಾ, ರಂಗಯ್ಯ, ಗಂಗಣ್ಣ, ಹನುಮಂತ, ಗೋವಿಂದ, ಮಂಜುನಾಥ, ಶರ್ಮಸ್ ಸೇರಿದಂತೆ ಕಾರ್ಮಿಕರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
