ಬಳ್ಳಾರಿ / ಕಂಪ್ಲಿ: ಅಂಜುಮನ್ ಖಿದ್ಮತೆ ಇಸ್ಲಾಂ ಕಂಪ್ಲಿ ನೇತೃತ್ವದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಮೃತಪಟ್ಟ ಶಿವಮೊಗ್ಗದ ದಿವಂಗತ ಶ್ರೀ ಮಂಜುನಾಥ ರಾವ್ ಬೆಂಗಳೂರಿನ ದಿವಂಗತ ಶ್ರೀ ಭರತ್ ಭೂಷಣ್ ಹಾಗೂ ಶ್ರೀ ಮಧುಸೂಧನ್ ರಾವ್ ಹಾಗೂ ಅವರೊಂದಿಗೆ ಮಡಿದ ಎಲ್ಲಾ 26 ಮೃತರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ನಗರದ ನಡವಲ ಮಸೀದಿಯಿಂದ ಅಂಬೇಡ್ಕರ್ ಸರ್ಕಲ್ ತನಕ ಕ್ಯಾಂಡಲ್ ಬೆಳಗಿಸಿ ಮೌನ ಮೆರವಣಿಗೆ ನಡೆಸಿ ಮೌನಚರಣೆ ಮೂಲಕ ಮೃತರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ನಂತರ ಅಂಜುಮನ್ ಖಿದ್ಮತೆ ಇಸ್ಲಾಂ ನ ಅಧ್ಯಕ್ಷರಾದ ಕಡಪ ಮಸ್ತಾನವಲಿ ಮಾತನಾಡಿ 26 ಪ್ರವಾಸಿಗರ ಹತ್ಯೆಯನ್ನು ನಾವು ಖಂಡಿಸುತ್ತೇವೆ. ದಾಳಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ನೀಡುಬೇಕು ಎಂದು ಕೇಂದ್ರ ಸರಕಾರಕ್ಕೆ ಆಗ್ರಹಿಸಿದರು.
ಅಂಜುಮನ್ ಖಿದ್ಮತೆ ಇಸ್ಲಾಂ ನ ಕಾರ್ಯದರ್ಶಿಯು ಜಹೀರುದ್ದೀನ ಮಾತನಾಡಿ ದಾಳಿಯು ಮಾನವೀಯತೆಯ ಮೇಲಿನ ದಾಳಿಯಾಗಿದ್ದು ಭಾರತದಲ್ಲಿರುವ ನಾವು ಹಿಂದೂ ಮುಸ್ಲಿಂ ಬಾಯಿ ಬಾಯಿ ಎಂದು ವಿವಿಧತೆಯಲ್ಲಿ ಏಕತೆಯಿಂದ ಬದುಕುತ್ತಿದ್ದು ಶಾಂತಿ ಕದಡುವ ಹುನ್ನಾರವನ್ನು ನಡೆಸುತ್ತಿರುವ ಕೆಲವು ಕ್ಷುದ್ರಶಕ್ತಿಗಳನ್ನು ಕೇಂದ್ರ ಸರ್ಕಾರ ಕೂಡಲೇ ಸದೆ ಬಡಿಯುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದ್ದರು.
ಅಂಜುಮನ್ ಖಿದ್ಮತೆ ಇಸ್ಲಾಂ ನ ಕೆ. ಮೆಹಬೂಬ ಮಾತನಾಡಿʼ ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಅತ್ಯಂತ ಖಂಡನೀಯ ಮತ್ತು ಹೃದಯ ವಿದ್ರಾವಕವಾಗಿದೆ. ನಾವು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಮತ್ತು ದಾಳಿಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇವೆʼ ʼಇದು ನಮ್ಮ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಮೇಲಿನ ದಾಳಿಯಾಗಿದೆ, ಸರಕಾರ ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ಪರಿಹಾರ ಮತ್ತು ನೆರವನ್ನು ನೀಡಬೇಕು. ಈ ದಾಳಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆಯನ್ನು ನೀಡಬೇಕು ಎಂದರು.
ಮುಸ್ಲಿ ಮುಖಂಡ ವೈ. ಅಬ್ದುಲ್ ಮುನಫ್ ಮಾತನಾಡಿ ಉಗ್ರರು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಉಗ್ರವಾದವನ್ನು ಒಂದೇ ಧರ್ಮಕ್ಕೆ ಯಾರೂ ಕೂಡಾ ಹೋಲಿಸಬಾರದು ಯಾವುದೇ ಧರ್ಮದ ಉಗ್ರರಿಗೆ ಗಲ್ಲು ಶಿಕ್ಷೆ ಆಗಬೇಕು, ನಾವು ಉಗ್ರವಾದವನ್ನು ಬಲವಾಗಿ ಖಂಡಿಸುತ್ತೇವೆ ಅದನ್ನು ಬೇರು ಸಹಿತ ಕಿತ್ತು ಹಾಕಬೇಕು. ಉಗ್ರರ ಗುಂಡಿಗೆ ಬಲಿಯಾದ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ದುಃಖವನ್ನು ಬರಿಸುವ ಶಕ್ತಿ ಅಲ್ಲಾ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ, ಸೈಯದ್ ಷಾಹ್ ಖಾಜಾಮೈನುದ್ದೀನ್ ಖಾದ್ರಿ, ಸೈಯದ್ ಷಾಹ್ ನೂರ ಅಹಮದ್ ಖಾದ್ರಿ, ಅಂಜುಮನ್ ಖಿದ್ಮತೆ ಇಸ್ಲಾಂ ನ ಉಪಾಧ್ಯಕ್ಷ ಅತಾವುಲ್ಲಾ ರೆಹಮಾನ್, ಖಜಾಂಚಿ ಮೌಲಾ ಹುಸೇನ್, ಪದಾಧಿಕಾರಿಗಳಾದ ಸೈಯದ್ ಗೆಸುದಾರಜ್ ಖಾದ್ರಿ, ಲಡ್ಡು ಅಬ್ದುಲ್ ಕರೀಂ, ಸೈಯದ್ ರಾಜಸಾಬ್, ಕೆ. ಮೆಹಬೂಬ, ಬಿ. ರಿಯಾಜ್ ಅಹ್ಮದ, ನಿಂಬೆಕಾಯಿ ಯೂನಸ್, ಬಿ. ತೌಸಿಫ್ , ಮುಖಂಡರಾದ ಕೆ. ಮೆಹೆಮೂದ್, ಬಿ. ಜಾಫರ, ರೆಹಮತವುಲ್ಲಾ, ರಜಾಕ್, ವಹಾಬ್, ಎಸ್. ಕೆ. ಇಂತಿಯಾಜ್, ಯು. ಜಿಲಾನ, ನಗರ ಹಾಗೂ ಗ್ರಾಮಗಳ ಮುಸ್ಲಿಂ ಸಮಾಜದ ಎಲ್ಲಾ ಮಸೀದಿಗಳ ಮೌಲ್ವಿಗಳು , ಮುಖ್ಯಸ್ಥರು ಸೇರಿದಂತೆ ಮುಸ್ಲಿಂ ಸಮಾಜದವರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
