೧.
ಅಯ್ಯಾ, ಬಡತನವನೇ
ಹಾಸಿ ಹೊದ್ದು ಮಲಗಿದರೂ
ಸ್ವಾಭಿಮಾನವ ಬಿಡದೇ,
ಹಗಲಿರುಳೂ ದುಡಿದು
ಚೆಂದದ ಬದುಕು ಕಟ್ಟಿಕೊಳ್ಳಲು
ಅವಕಾಶವನ್ನೇ ಕೊಡದ
ಸೊಕ್ಕಿನ ಸಿರಿವಂತ ಸೋಮಾರಿಗಳು,ಇದ್ದರೂ
ಸತ್ತಂತೆ ನೋಡಾ ಶಿವ ಶಿವಾ!
೨.
ಅಯ್ಯಾ ನಾವು ನುಡಿದಂತೆ
ನಡೆಯದವರಯ್ಯ,
ಹುಸಿಯ ನುಡಿಯುವವರು
ನಾವು ನೋಡಯ್ಯ,
ಅನ್ಯಾಯ ಮಾಡಿ ಮೇಲೆ
ಬಂದವರು ನಾವಯ್ಯ,
ಲೋಕದ ಡೊಂಕನು
ತಿದ್ದಲು ಹೊರಟವರು ನಾವಯ್ಯ!
ನಮ್ಮ ನಡೆ ಒಂದು ಪರಿ,
ನಮ್ಮ ನುಡಿ ಒಂದು ಪರಿ,
ನೋಡೆಂದ ಶಿವ ಶಿವಾ!
೩.
ಸು ಮಾರ್ಗದಲಿ ನಡೆದು
ಸುಜ್ಞಾನಿಗಳಾಗಿರೆಂದು
ಅನವರತ ಬೋಧಿಸಿದರು,
ಬಸವಾದಿ ಪ್ರಮಥರು,
ದು ರ್ಮಾಗದಲಿ ನಡೆದು
ಅವಿವೇಕಿ, ಅಜ್ಞಾನಿ
ಗಳಾಗುತಿಹರು,
ಇವರು ಆಧುನಿಕರು!
ನೋಡೆಂದ ಶಿವ ಶಿವಾ!
೪.
ಹೊಸ ತಲೆಮಾರಿನ
ಜನರಿಗೆ ಸಮಯ ಪ್ರಜ್ಞೆ,
ಇಲ್ಲವೆಂದರೆ ನನ್ನನ್ನೇ
ನಿಂದಿಸುವರಯ್ಯ,
ಇಂಥವರಿಗೆ ಬುಧ್ಧಿ ಹೇಳಿದರೆ
ನನ್ನನ್ನೇ ಬಯ್ಯುವರಯ್ಯ,
ಇವರಿಗೆ ಯಾವಾಗ ಬುದ್ಧಿ
ಬರುವುದೋ ಶಿವ ಶಿವಾ!
- ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ -ಕೊಪ್ಪಳ-.
ಮೊಬೈಲ್ ಸಂಖ್ಯೆ.
೭೯೯೬೭೯೦೧೮೯.
