ಬೆಳಗಾವಿ/ ರಾಮದುರ್ಗ : ಪಟ್ಟಣದಲ್ಲಿ ಮಂಗಳವಾರ ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆ 2025 ನ್ನು ವಿರೋಧಿಸಿ ರಾಮದುರ್ಗ ತಾಲೂಕ ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ವಕ್ಫ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಕಾರ್ ಸ್ಟ್ಯಾಂಡ್ ನಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಮಿನಿ ವಿಧಾನಸೌಧಕ್ಕೆ ಬಂದು ಸಮಾವೇಶಗೊಂಡಿತು. ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಮುಸ್ಲಿಮರು ಕೈಗೆ ಕಪ್ಪು ಪಟ್ಟಿಯನ್ನು ಧರಿಸಿಕೊಂಡು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ನಂತರ ರಾಮದುರ್ಗ ತಹಶೀಲ್ದಾರ್ ಪ್ರಕಾಶ್ ಹೂಳೆಪ್ಪಗೋಳ ಅವರ ಮುಖಾಂತರ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಾಮೀಯಾ ಮಜೀದ್ ಮೌಲಾನಾ ಜಹೂರ ಹಾಜಿರವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ “ಸಂವಿಧಾನ ಬದ್ದ ಹಕ್ಕುಗಳನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಲು ಹೊರಟಿರುವ ಕ್ರಮ ನಿಜಕ್ಕೂ ಖಂಡನೀಯ ಸಂವಿಧಾನದ ಆರ್ಟಿಕಲ್ 26ರ ಪ್ರಕಾರ ಈ ದೇಶದ ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕನ್ನಾಗಿ ಖಾತ್ರಿ ಪಡಿಸುತ್ತಿದೆ. ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಯು ಧರ್ಮ ವಿರೋಧಿಯಾಗಿದೆ” ಎಂದು ಹೇಳಿದರು.
ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಭಾರತವನ್ನು ಒಂದು ಸರ್ವಧರ್ಮ-ಸಮಬಾಳು ಹಾಗೂ ಎಲ್ಲರಿಗೂ ಇತರೆ ಸ್ವಾತಂತ್ರ್ಯಗಳ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಮಾಡುವ ಸಂವಿಧಾನ 1950 ಜನವರಿ 26 ರಂದು ಜಾರಿಗೆ ಬಂತು. ಒಂದು ಬಲಿಷ್ಠವಾದ ಸಂವಿಧಾನ ನೀಡಿದ ಬಾಬಾಸಾಹೇಬ ಅಂಬೇಡ್ಕರ್ ರವರ ಆಶಯಗಳು ಈಡೇರಿಸದ ಕೇಂದ್ರ ಸರ್ಕಾರ ಇವತ್ತು ಬದಲಾವಣೆ ಮಾಡಲು ಹೊರಟಿರುವುದು ವಿಷಾದನೀಯ ಎಂದು ಹಳೆ ತೊರಗಲ್ ಗ್ರಾಮದ ಮೌಲಾನಾ ಅಬ್ದುಲ್ ರಜಾಕ್ ಸರಕಾಜಿ ರವರು ಖೇದ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ಬಿ. ಆರ್. ದೊಡಮನಿ ಅವರು ಮಾತನಾಡಿ “ಇವತ್ತು ಸುಳ್ಳುಗಳನ್ನು ಹೇಳಿ ಆರ್ಟಿಕಲ್ 26ನ್ನು ಉಲ್ಲಂಘನೆ ಮಾಡಿ ವಕ್ಫ ಕಾಯ್ದೆ ತಿದ್ದುಪಡಿ ಮಾಡಿರುವುದು ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕ್ಫನ ಈ ಹಿಂದಿನ ಕಾಯಿದೆಯಲ್ಲಿ ಹಿರಿಯರು ತಮ್ಮ ಆಸ್ತಿಗಳನ್ನು ದಾನವಾಗಿ ದೇವರ ಹೆಸರಲ್ಲಿ ಕೊಟ್ಟಿದ್ದು ಇದೆ. ಈಗಲೂ ಆ ಕಾಯಿದೆ ಇದೆ. ಆದರೆ ಈಗಿನ ಕೇಂದ್ರ ಸರಕಾರ ತಿದ್ದುಪಡಿ ಮಾಡಿ ವಕ್ಫ ಕಮಿಟಿಗೆ ದಾನಮಾಡುವ ವ್ಯಕ್ತಿ ಕಡ್ಡಾಯವಾಗಿ ನಿರಂತರ 5 ವರ್ಷದವರೆಗೆ ಇಸ್ಲಾಮಿಕ್ ನಿಯಮಗಳನ್ನು ಪಾಲಿಸಿರಬೇಕು ಎಂದು ತಿದ್ದುಪಡಿ ಮಾಡಿದ್ದು ನಿಜಕ್ಕೂ ಖಂಡನೀಯ ಎಂದು ಸಿ.ಐ.ಟಿ.ಯು ನ ಮುಖಂಡ ಜಿ.ಎಮ್.ಜೈನಖಾನ್, ಜನಪರ ಟ್ರಸ್ಟ್ ಅಧ್ಯಕ್ಷ ಸುಭಾಸ ಘೋಡಕೆ, ಜಹೂರ ಹಾಜಿ, ಹಾಲುಮತದ ಸಮಾಜದ ಮುಖಂಡರಾದ ಸರಿಯಪ್ಪ ಕ್ವಾರಿ, ನಿಂಗಪ್ಪ ಕರಿಗಾರ, ಅಂಜುಮನ್ ಇಸ್ಲಾಂ ಕಮಿಟಿಯ ಮಹಮ್ಮದಶಫಿ ಬೆಣ್ಣಿ, ಜಮಿಯತ್ ಉಲಮಾ ಮುಖಂಡ ಇಸ್ಮಾಯಿಲ್ ಮಕಾನದಾರ, ಮೌಲಾನಾ ಇಮಾಮಹುಸೇನ, ರಡ್ಡಿ ಸಮಾಜದ ಜ್ಞಾನೇಶ್ವರ ಮೇಲಪ್ಪಗೋಳ, ಮಾರಾಠಾ ಸಮಾಜದ ರಾಜು ಮಾಣೆ, ಪಂಚಮಸಾಲಿ ಮುಖಂಡರಾದ ಪರ್ವತಗೌಡ ಪಾಟೀಲ, ಅಂಜುಮನ್ ಕಮಿಟಿಯ ಬಷೀರ್ ಅಹ್ಮದ ರೋಣ ಮುಂತಾದವರು ಮಾತನಾಡಿ ವಕ್ಫ ತಿದ್ದುಪಡಿ ಕಾಯ್ದೆ 2025ನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಡಿ.ಎಸ್.ಎಸ್. ಮುಖಂಡ ಬಿ.ಆರ್ ದೋಡಮನಿ, ಜನಪರ ಟ್ರಸ್ಟ್ ರಾಜ್ಯಾಧ್ಯಕ್ಷ ಸುಭಾಸ್ ಗೋಡಕೆ, ಸಿ.ಆಯ್.ಟಿ.ಯು ಕಾರ್ಮಿಕ ಸಂಘಟನೆ ಮುಖಂಡರಾದ ಗೈಬು ಜೈನೆಖಾನ್, ನಾಗಪ್ಪ ಸಂಗೊಳ್ಳಿ, ಪರ್ವತಗೌಡ ಪಾಟೀಲ, ಪಂಚಮಶಾಲಿ ಮುಖಂಡರಾದ ಪಡಿಯಪ್ಪ ಕ್ವಾರಿ, ನಿಂಗಪ್ಪ ಕರಿಗಾರ, ಕರ್ನಾಟಕ ಪ್ರದೇಶ ಕುರುಬರ ಸಂಘದ ಶಶಿಕಾಂತ ನೆಲ್ಲೂರ, ರಾಜು ಶಲವಡಿ ಎಸ್.ಜಿ. ಚಿಕ್ಕನರಗುಂದ, ಸಮೂದಾಯ ಘಟಕ ರಾಮದುರ್ಗ ಹಾಗೂ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಶಬ್ಬೀರ ಕಾಜಿ, ಶಫಿ ಬೆಣ್ಣಿ, ಜಾಮಿಯಾ ಮಸ್ಜಿದ್ ಮೌಲಾನಾ ಜಹೂರ್ ಹಾಜಿ, ಎಚ್. ಎಮ್. ಸಿ ರಾಜ್ಯ ಉಪಾಧ್ಯಕ್ಷ ಎಂ.ಕೆ.ಯಾದವಾಡ, ಅಬ್ದುಲಕಾದಿರ ಸರಕಾಜಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜಹೂರ್ ಹಾಜಿ, ಸೋಹಿಲ್ ಭೈರಕದಾರ್, ಅಫ್ತಾಬ ಸರಮುಲ್ಲಾ, ಎಸ್.ಡಿ.ಪಿ.ಆಯ್ ಪಕ್ಷದ ಮುಖಂಡ ಸಾದಿಕ್ ದಿಲಾವರ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.
- ಕರುನಾಡ ಕಂದ
