ಕಲಬುರಗಿ: “ಆಪರೇಷನ್ ಸಿಂಧೂರ್ ಕೇವಲ ಭಯೋತ್ಪಾದಕ ವಿರುದ್ಧ ಕಾರ್ಯಾಚರಣೆಯಾಗಿರಲಿಲ್ಲ, ಬದಲಾಗಿ ಅದು ನವ ಭಾರತದ ಅಪ್ರತಿಮ ಶಕ್ತಿಯನ್ನು ಜಗತ್ತಿಗೆ ಸಾರಿದ ಐತಿಹಾಸಿಕ ದಿನ” ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಬಣ್ಣಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ಮಧ್ಯರಾತ್ರಿ ನಡೆಸಿದ ವೈಮಾನಿಕ ದಾಳಿಯ ಕುರಿತಂತೆ ಪ್ರತಿಕ್ರಿಯಿಸಿರುವ ಅವರು ‘ಸಿಂಧೂರ ‘ ಎನ್ನುವುದು ರಾಷ್ಟ್ರದ ವೀರತ್ವ, ಧೈರ್ಯ ಮತ್ತು ಸಂಕಲ್ಪದ ಪ್ರತೀಕವಾಗಿ ಹೊರಹೊಮ್ಮಿದೆ. ನಮ್ಮ ಸೇನೆಯ ವ್ಯವಸ್ಥಿತ ಹಾಗೂ ಕೆಚ್ಚೆದೆಯ ಕಾರ್ಯಾಚರಣೆಯ ಮೂಲಕ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ’ ಎಂದು ಹೇಳಿದ್ದಾರೆ. ಹೊಸ ಭಾರತವನ್ನು ಯಾರಾದರೂ ಕೆಣಕಿದರೆ, ನಮ್ಮ ಉತ್ತರವು ಇತಿಹಾಸವನ್ನೇ ನಡುಗಿಸುವಂತಹ ಶಕ್ತಿಯನ್ನು ಹೊಂದಿರುತ್ತದೆ. ಕೇವಲ 25 ನಿಮಿಷಗಳಲ್ಲಿ ನಡೆದ ಪರಿಣಾಮಕಾರಿ ಕಾರ್ಯಾಚರಣೆಯಲ್ಲಿ ನಮ್ಮ ಸೇನೆಯು ಭಯೋತ್ಪಾದಕ ಅಲ್ಮಲ್ ಕಸಬ್‌ನ ತರಬೇತಿ ಕೇಂದ್ರ ಸೇರಿ 9 ಪ್ರದೇಶಗಳಲ್ಲಿನ 21 ಉಗ್ರರ ಅಡಗುತಾಣಗಲನ್ನು ಕ್ಷಿಪಣಿ ದಾಳಿ ಮಾಡಿ ನಾಶ ಮಾಡಿರುವುದು ಬದಲಾದ ಭಾರತ
ನೀಡಿದ ಪ್ರತಿಕ್ರಿಯೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಢ ಮತ್ತು ಅಚಲ ನಾಯಕತ್ವದಲ್ಲಿ, ಭಾರತವು ಮತ್ತೊಮ್ಮೆ ಭಯೋತ್ಪಾದನೆ ಅಥವಾ ಅದನ್ನು ಬೆಂಬಲಿಸುವವರನ್ನು ಸಹಿಸುವುದಿಲ್ಲ ಎಂದು ಮತ್ತೊಮ್ಮೆ ವಿಶ್ವಕ್ಕೆ ತೋರಿಸಿಕೊಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ. ನಾಗರಿಕರಿಗೆ ಹಾನಿಯಾಗದಂತೆ ನಮ್ಮ ಸೇನೆಯ ಜವಾಬ್ದಾರಿಯುತ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಯು ನಿಜಕ್ಕೂ ಶ್ಲಾಘನೀಯ. ಭಯೋತ್ಪಾದಕ ಹಾಗೂ ಪಾಕಿಸ್ತಾನದ ಕುತಂತ್ರದ ವಿರುದ್ಧ ಪ್ರತೀಕಾರ ತೀರಿಸಬೇಕೆಂಬ ಭಾರತೀಯರ ಅಪೇಕ್ಷೆ ಈಡೇರಿದೆ ಎಂದರು.
- ಕರುನಾಡ ಕಂದ
