
ಬಳ್ಳಾರಿ / ಕಂಪ್ಲಿ : ಸಮಾಜದಲ್ಲಿನ ಅಸಮಾನತೆ ವಿರೋಧಿಸಿ ಸಾಮಾಜಿಕ ಕ್ರಾಂತಿಯನ್ನೇ ಹುಟ್ಟು ಹಾಕಿದ ಮಹಾನ್ ಮಾನವತಾವಾದಿ ಬಸವಣ್ಣನವರ ತತ್ವಾದರ್ಶಗಳು ನಮ್ಮೆಲ್ಲರ ಜೀವನಕ್ಕೆ ದಾರಿ ದೀಪವಾಗಿದೆ ಎಂದು ಘಟಕಾಧಿಕಾರಿ ಕೆ.ಹೊನ್ನೂರವಲಿ ಹೇಳಿದರು.
ಇಲ್ಲಿನ ಗೃಹ ರಕ್ಷಕದಳದ ಕಛೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಶರಣ ಬಸವಣ್ಣನವರ ಜಯಂತಿಯಲ್ಲಿ ಮಾತನಾಡಿ, ಕಾಯಕವೇ ಕೈಲಾಸ ಎನ್ನುವ ತತ್ವದಲ್ಲಿ ಕಾಯಕ ನಿಷ್ಠೆಗೆ ಪ್ರಾಧಾನ್ಯತೆ ನೀಡಿ ಪ್ರತಿಯೊಬ್ಬರಲ್ಲೂ ವತ್ತಿ ಗೌರವ ಬೆಳೆಸಿದ ಕೀರ್ತಿಯೂ ಕಾಯಕ ಯೋಗಿ ಬಸವಣ್ಣನವರಿಗೆ ಸಲ್ಲುತ್ತದೆ. ಬಸವಣ್ಣನವರು ಮನುಕುಲದ ಶ್ರೇಯಸ್ಸಿಗಾಗಿ ಅವಿರತ ಹೋರಾಟ ನಡೆಸುವ ಮೂಲಕ ಸಮಾನತೆಯ ಸಾಮಾಜಿಕ ಕ್ರಾಂತಿಯನ್ನು ಜನಮಾನಸದಲ್ಲಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ತತ್ವ, ಆದರ್ಶಗಳು ಇಂದಿಗೂ ಜನ ಮಾನ್ಯತೆಯನ್ನು ಪಡೆದುಕೊಳ್ಳುತ್ತಿವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಘಟಕಾಧಿಕಾರಿ ಹೆಚ್. ಗಿರಿಧರ, ಲೀಡರ್ ಕೆ. ಸುರೇಶ ಸೇರಿದಂತೆ ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
