
ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ಕುಡತಿನಿ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸುಜಾತ ಸತ್ಯಪ್ಪ ಇವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ (ಬಳ್ಳಾರಿ ತಹಶೀಲ್ದಾರ್) ಟಿ. ರೇಖಾ ಘೋಷಿಸಿದರು.
ಇಲ್ಲಿನ ಕಛೇರಿ ಸಭಾಂಗಣದಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯಲ್ಲಿ ಸುಜಾತ ಸತ್ಯಪ್ಪ ನಾಮಪತ್ರ ಸಲ್ಲಿಸಿದ್ದರು. ಆದರೆ, ಇವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆ ಅವಿರೋಧವಾಗಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದು, ಸರ್ವ ಸದಸ್ಯರ ಸಹಕಾರದೊಂದಿಗೆ ಪಪಂ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಹಶೀಲ್ದಾರರು ತಿಳಿಸಿದರು.
ನಂತರ ನೂತನ ಅಧ್ಯಕ್ಷೆ ಸುಜಾತ ಸತ್ಯಪ್ಪ ಮಾತನಾಡಿ, ಸರ್ವ ಸದಸ್ಯರು ನಮ್ಮ ಮೇಲೆ ವಿಶ್ವಾಸವಿಟ್ಟು, ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಜವಾಬ್ದಾರಿ ಹೆಚ್ಚಿಸಿದ್ದು, ಕುಡಿಯುವ ನೀರು, ಬೀದಿ ದೀಪ, ರಸ್ತೆ, ಸ್ವಚ್ಚತೆ, ಹೀಗೆ ಅಭಿವೃದ್ಧಿ ಕಾರ್ಯಗಳೊಂದಿಗೆ ಮಾದರಿ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲಾಗುವುದು ಎಂದರು.
ಚುನಾವಣೆ ಪ್ರಕ್ರಿಯೆ ವೇಳೆ ಮುಖ್ಯಾಧಿಕಾರಿ ತೀರ್ಥಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಜಶೇಖರ, ಉಪಾಧ್ಯಕ್ಷ ಕನಿಕೇರಿ ಪಂಪಾಪತಿ, ಸದಸ್ಯರಾದ ವೆಂಕಟರಮಣಬಾಬು, ರಾಮಲಿಂಗಪ್ಪ, ಸುನೀಲ, ಹಾಲಪ್ಪ, ದುಗ್ಗೆಪ್ಪ, ಲೆನಿನ್, ಮಂಜುನಾಥ, ಬಸಮ್ಮ, ಸಾಲಮ್ಮ, ವರಲಕ್ಷ್ಮಿ, ದೇವಮ್ಮ, ಗೀತಾ, ಶಂಕ್ರಮ್ಮ, ಭಾಗ್ಯಮ್ಮ ಇದ್ದರು.
ತದನಂತರ ನೂತನ ಅಧ್ಯಕ್ಷರಿಗೆ ಸದಸ್ಯರು, ಮುಖಂಡರು ಮಾಲಾರ್ಪಣೆಯೊಂದಿಗೆ ಗೌರವಿಸಿದರು.
ಈ ಸಂದರ್ಭದಲ್ಲಿ ಸತ್ಯಪ್ಪ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
