
ಬಳ್ಳಾರಿ/ ಕಂಪ್ಲಿ : ತಾಲ್ಲೂಕಿನ ಮೆಟ್ರಿ ಗ್ರಾಮದಲ್ಲಿ ಬನ್ನಿ ಮಹಾಂಕಾಳಿ ದೇವಸ್ಥಾನ ಉದ್ಘಾಟನೆ ಮತ್ತು ಬನ್ನಿ ಮಹಾಂಕಾಳಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯು ಶುಕ್ರವಾರ ಭಕ್ತಿಭಾವದಿಂದ ಜರುಗಿತು.
ಪ್ರತಿಷ್ಠಾಪನೆ ಅಂಗವಾಗಿ ವಾಸ್ತುಪೂಜೆ, ಮಹಾಪೂರ್ಣಾಹುತಿ, ಕುಂಭಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೇ 7ರಿಂದ 9ರವರೆಗೆ ವೇದಬ್ರಹ್ಮ ರವಿಚಂದ್ರ ಆಚಾರ್ಯರ ಪೌರೋಹಿತ್ಯದಲ್ಲಿ ನಡೆಯಿತು.
ಕಾರ್ಯಕ್ರಮ ಸಾನ್ನಿಧ್ಯ ವಹಿಸಿದ್ದ ಹರಗಿನಡೋಣಿ ಪಂಚವಣಿಗೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮ ಪರಿಪಾಲಿಸಿ ನಡೆದಾಗ ಬಾಳಿನಲ್ಲಿ ಸೌಖ್ಯ. ಮನುಷ್ಯ ಬದುಕಿ ಬಾಳಲು ನೀರು, ಅನ್ನ ಮತ್ತು ಗಾಳಿ ಎಷ್ಟು ಅವಶ್ಯಕತೆಯೋ, ಅಷ್ಟೇ ಮುಖ್ಯ ಧರ್ಮ ಪರಿಪಾಲನೆ ಎಂದು ತಿಳಿಸಿದರು.
ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದರು.
ಬಿ.ಎ. ವೃಷಬೇಂದ್ರಯ್ಯಸ್ವಾಮಿ, ಎಚ್.ಎಂ. ವಿಶ್ವೇಶ್ವರಯ್ಯ ಸ್ವಾಮಿ ಮಾತನಾಡಿದರು. ಶಾಸಕ ಜೆ.ಎನ್. ಗಣೇಶ್ ಅವರನ್ನು ಗೌರವಿಸಲಾಯಿತು.
ಗಿರೆಡ್ಡಿ ಲಿಂಗಾರೆಡ್ಡಿ ಕುಟುಂಬದವರು ಹರಗಿನಡೋಣಿ ಶ್ರೀಗಳ ತುಲಾಭಾರ ನೆರವೇರಿಸಿದರು. ಊಳೂರು ರಾಜಪ್ಪ ಅವರು ಒಂದು ಜೋಡಿ ಉಚಿತ ವಿವಾಹ ನಡೆಸಿಕೊಟ್ಟರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಂಪ್ಲಿ ತಾಲ್ಲೂಕು ಮೆಟ್ರಿ ಗ್ರಾಮದ ಕಾಳಿಕಾದೇವಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಹರಗಿನಡೋಣಿ ಪಂಚವಣಿಗೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ
ತುಲಾಭಾರವನ್ನು ಗಿರೆಡ್ಡಿ ಲಿಂಗಾರೆಡ್ಡಿ ಕುಟುಂಬದವರು ಶುಕ್ರವಾರ ನೆರವೇರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಗ್ರಾಮದ ಮುಖಂಡರು, ದೇವಸ್ಥಾನದ ಸದ್ಭಕ್ತರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
