
ಕೊಪ್ಪಳ : ಹತ್ತನೆಯ ಶತಮಾನದ ಕನ್ನಡದ ಆದಿ ಕವಿ ಪಂಪನ ಕಾವ್ಯವೆ ರಸಭರಿತ ಕಬ್ಬು ಎಂದು ಹಿರಿಯ ಸಾಹಿತಿ ಎಚ್ ಎಸ್ ಪಾಟೀಲ ಅಭಿಪ್ರಾಯ ಪಟ್ಟರು.
ಸ್ಥಳೀಯ ಶಕ್ತಿ ಶಾರದೆಯ ಮೇಳ ಮತ್ತು ಬೆರಗು ಪ್ರಕಾಶನ ಜಂಟಿಯಾಗಿ ಡಿ ಎಂ ಬಡಿಗೇರ ಅವರ ‘ಅವ್ವ’ ಸದನದಲ್ಲಿ ಆಯೋಜಿಸಿದ್ದ ಮಾಸಿಕ ಚಿಂತನ ಮಂಥನ ಕಾರ್ಯಮದಲ್ಲಿ ಪಂಪ ಕವಿ ವಿರಚಿತ ‘ಪಂಪಭಾರತ’ ಕೃತಿಯ ಒಂದು ಪ್ರಸಂಗ ಕುರಿತು ಅವರು ಮಾತನಾಡಿದರು.
ಅರಿಕೇಸರಿಯ ಅಣತಿಯಂತೆ ಆತ ವಿಕ್ರಮಾರ್ಜುನ ವಿಜಯವನ್ನು ಬರೆಯಲು ಮುಂದಾಗಿ, ಅದನ್ನು ಅಷ್ಟೇ ಪ್ರಾಮಾಣಿಕತೆಯಿಂದ ಬರೆದು ಮುಗಿಸುತ್ತಾನೆ. ಪಾಂಡವರು ಮತ್ತು ಕೌರವರ ಯುದ್ಧ ಮುಗಿದು ಸಂಧಾನ ಸಂಭೆಯ ಕುರಿತು ಪಂಪ ಬರೆದ ಪ್ರಸಂಗವನ್ನು ಅವರು ಸಭೆಯಲ್ಲಿ ಮಂಡನೆ ಮಾಡಿದರು.
ಅನೇಕ ನಿದರ್ಶನಗಳನ್ನು ಉಲ್ಲೇಖ ಮಾಡುತ್ತಾ ವಿವರಿಸಿದರು. ಪಂಪ ಸಾರ್ವಕಾಲಿಕ ಕವಿ ಎಂದು ಅವರು ಅಭಿಪ್ರಾಯಿಸಿದರು. ಲೌಕಿಕ ಕಾವ್ಯದಂತೆ ಅಲೌಕಿಕ ಕಾವ್ಯ ಕೂಡ ಪಂಪ ಬರೆದದ್ದನ್ನು ಅವರು ನೆನಪಿಸಿದರು.
ನಿವೃತ್ತ ಶಿಕ್ಷಕ ಎಸ್ ಎಂ ಕಂಬಾಳಿಮಠ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಪಂಪನ ಕುರಿತು ಮತ್ತು ಆತನ ಕಾವ್ಯ ಕುರಿತು ಮಾತನಾಡುವುದಕ್ಕೆ ಅಗಾಧ ಅಧ್ಯಯನ ಬೇಕಾಗುತ್ತದೆ ಎಂದರು. ಪಂಪ, ರನ್ನ ,ಪೊನ್ನ ನಿಜವಾದ ರತ್ನಗಳೇ. ಅವರನ್ನು ಕನ್ನಡ ಸಾಹಿತ್ಯ ಲೋಕ ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ ಎಂದರು.
ಹಿರಿಯ ಸಾಹಿತಿ ಈಶ್ವರ ಹತ್ತಿ, ಅಲ್ಲಮಪ್ರಭು ಬೆಟ್ಟದೂರು, ಮಹಾಂತೇಶ ಕೊತಬಾಳ, ಶಿವಪ್ರಸಾದ ಹಾದಿಮನಿ, ಡಾ. ಪ್ರವೀಣ್ ಪೋಲಿಸ್ ಪಾಟೀಲ್, ಡಾ. ಪಾರ್ವತಿ ಕನಕಗಿರಿ, ಪತ್ರಕರ್ತ ಶರಣಪ್ಪ ಬಾಚಲಾಪುರ, ಎಂ ಬಿ ಪಾಟೀಲ ಮುಂತಾದವರು ಇದ್ದರು.
ಶಿ ಕಾ ಬಡಿಗೇರ ನಿರೂಪಿಸಿ, ವಂದಿಸಿದರು.
- ಕರುನಾಡ ಕಂದ
