
೧.
ಶರಣರ ಸುಳ್ನುಡಿಗಳನು
ನಾವಿಂದು ಅಪಾರ್ಥ ಮಾಡಿದ್ದೇವೆ, ಅಯ್ಯಾ,
ಅವರು ಹೇಳಿದ್ದಕ್ಕೆಲ್ಲಾ
ವಿರುದ್ಧ ದಿಕ್ಕಿನಲ್ಲಿ ನಾವು
ನಡೆಯುತ್ತಿರುವೆವಯ್ಯ,!
ಅರ್ಥವಿರದ ಆಚರಣೆಗಳ
ಅನುಕರಿಸುತ್ತಾ,
ಅವಿವೇಕಿಗಳಾಗಿಹೆವು,
ನೋಡಾ ಶಿವ ಶಿವಾ!
೨.
ಅವಿವೇಕ, ಅಜ್ಞಾನಗಳ
ದೂರ ಸರಿಸಯ್ಯ,
ವಿವೇಕ, ಸುಜ್ಞಾನಗಳ
ನನ್ನೊಳಗಿರಿಸಯ್ಯ,
ಕತ್ತಲೆಯೇ ತುಂಬಿದೆ,
ಈ ಬಾಳು, !
ಬೆಳಕಿಗಾಗಿ ಹಂಬಲಿಸಿದೆ ,
ಎನ್ನ ಮನ,ಬೆಳಕ ತೋರಿ
ಮುನ್ನಡೆಸೆಂದ ಶಿವ ಶಿವಾ!
೩.
ಕಾಲ ಕೆಟ್ಟಿತೆಂದು ಕೈ ಕಟ್ಟಿ
ಕುಳಿತರೆ ಹೊಟ್ಟೆಗೆ ಹಿಟ್ಟು
ಸಿಗುವುದೇನಯ್ಯ,!
ಕೆಟ್ಟಿರುವುದು ಕಾಲವಲ್ಲಯ್ಯ,
ನಮ್ಮವರ ಮನಸ್ಸುಗಳಯ್ಯ,
ಮುಂದೆ ಇನ್ನೆಂಥ ದಿನಗಳು
ಬರಲಿವೆಯೋ ಶಿವ ಶಿವಾ!.
೪.
ಹೇ ಹುಲು ಮಾನವ,
ನಾ ಅವರಂತಾಗಲಿಲ್ಲ,
ನಾ ಇವರಂತಾಗಲಿಲ್ಲ,
ಎಂಬ ಕೊರಗಿನಲಿ
ಸೊರಗಿ ಹೋಗುವ ಮುನ್ನ
ನಿನ್ನಂತೆ ನೀನಾಗಿ
ಹೋಗೆಂದ ಶಿವ ಶಿವಾ!
- ಶಿವಪ್ರಸಾದ್ ಹಾದಿಮನಿ, ಕನ್ನಡ ಉಪನ್ಯಾಸಕರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ -ಕೊಪ್ಪಳ.
ಮೊಬೈಲ್ ಸಂಖ್ಯೆ.
೭೯೯೬೭೯೦೧೮೯.
