ಬಳ್ಳಾರಿ / ಕಂಪ್ಲಿ : ಶುದ್ಧ ಕುಡಿಯುವ ನೀರಿನ ಘಟಕ, ಬೀದಿ ದೀಪ ಸೇರಿದಂತೆ ನಾನಾ ಸಮಸ್ಯೆ ಆಲಿಸಿದ್ದು, ಅತಿ ಅವಶ್ಯಕವಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ಕೂಡಲೇ ಕ್ರಮವಹಿಸಬೇಕು ಮತ್ತು ಉಳಿದ ಬೇಡಿಕೆಗಳನ್ನು ಹಂತ ಹಂತದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಶಾಸಕಿ ಅನ್ನಪೂರ್ಣ ಈ. ತುಕಾರಾಂ ತಿಳಿಸಿದರು.
ಕುಡತಿನಿ ಪಟ್ಟಣದ ಪ. ಪಂ. ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ ನಂತರ ಮಾತನಾಡಿ, ವಿವಿಧ ವಾರ್ಡ್ಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕೆಲ ವಾರ್ಡ್ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ಥಿಯಲ್ಲಿದ್ದು, ಕೂಡಲೇ ದುರಸ್ಥಿ ಮಾಡುವ ಕೆಲಸವಾಗಬೇಕು. ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದ ಪರಿಣಾಮ ಪಟ್ಟಣದಲ್ಲಿ ಸಾಕಷ್ಟು ಸಮಸ್ಯೆಗಳು ತಲೆದೋರುವಂತಾಗಿದೆ. ಆದ್ದರಿಂದ ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುವ ಮೂಲಕ ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ನಾನಾ ಸಮಸ್ಯೆಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಖಡಕ್ ಆಗಿ ಸೂಚಿಸುವ ಜತೆಗೆ ಡಿಗ್ರಿ, ಡಿಪ್ಲೊಮಾ, ಕ್ರೀಡಾಂಗಣ ನಿರ್ಮಿಸಬೇಕೆಂದು ಬೇಡಿಕೆ ಸಂಬಂಧ ಸಂಸದರ ಗಮನಕ್ಕೆ ತಂದು, ಸೂಕ್ತ ಕ್ರಮವಹಿಸಲಾಗುವುದು ಎಂದರು.
ಇಲ್ಲಿನ ಸಭೆಯಲ್ಲಿ ಭಾಗವಹಿಸಿದ ಕೆಲಸ ಸದಸ್ಯರು, ಜನರು ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪದ ಕೊರತೆ, ಮುಖ್ಯಾಧಿಕಾರಿಯ ನಿರ್ಲಕ್ಷ್ಯ. ಹೀಗೆ ನಾನಾ ಕುಂದು ಕೊರತೆಗಳ ಬುತ್ತಿಯನ್ನು ಶಾಸಕರ ಮುಂದಿಟ್ಟರು. ಈ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಶಾಸಕರು ಅಧಿಕಾರಿಗಳು ಕೂಡಲೇ ಗಮನ ಹರಿಸಿ, ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಸುಜಾತ ಸತ್ಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ವಿ. ರಾಜಶೇಖರ, ಉಪಾಧ್ಯಕ್ಷ ಕನಕೇರಿ ಪಂಪಾಪತಿ, ಸದಸ್ಯರು, ಮುಖ್ಯಾಧಿಕಾರಿ ತೀರ್ಥಪ್ರಸಾದ್, ಎಇಇ ಅರುಣ್ ಪಟೇಲ್, ರಾಜೇಂದ್ರ ಪ್ರಸಾದ್, ಜೆಇ ಶಾರದಾ, ಬ್ಲಾಕ್ ಅಧ್ಯಕ್ಷ ಏಕಾಂಬ್ರಪ್ಪ, ಮುಖಂಡರಾದ ಕೆ. ಎಸ್. ಎಲ್.ಸ್ವಾಮಿ, ಪಲ್ಲೇದ್ ಪ್ರಭು, ಕಂಬತ್ ರಾಮಾಂಜಿನಿ, ಚಂದ್ರಪ್ಪ, ಕೌಸಿಕ್, ವಿಠೋಬ, ಹನುಮಂತ, ವಿನೋದ, ರಮೇಶ, ಪ್ರತಾಪ್ ಆನಂದ ಸೇರಿದಂತೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ
