ಲಾಲನೆ-ಪಾಲನೆ ವ್ಯವಸ್ಥೆ ಮಗುವಿನ ಆರೈಕೆಯಲ್ಲಿ ಟಿ.ಬೇಗೂರಿನ ಕೂಸಿನ ಮನೆ ನಂ-೧
ಹೈಟೆಕ್ ಕೂಸಿನ ಮನೆಗೆ ಭೇಟಿ ನೀಡಿದ ಆರ್.ಡಿ.ಪಿ.ಆರ್ ಇಲಾಖೆ ತಂಡ : ಪೋಷಕರ ಅಭಿಪ್ರಾಯ ಸಂಗ್ರಹ
ಬೆಂಗಳೂರು/ ಟಿ.ಬೇಗೂರು : ಕೂಲಿ ಕಾರ್ಮಿಕರ ಶಿಶುಗಳನ್ನು ಪೋಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶನದಂತೆ ದಿ. 27-ಮಾರ್ಚ್-2024 ರಂದು ಟಿ.ಬೇಗೂರಿನಲ್ಲಿ ಪ್ರಾರಂಭವಾದ ಕೂಸಿನ ಮನೆ ಗ್ರಾಮೀಣ ಪ್ರದೇಶದ ದಿನಗೂಲಿ ನೌಕರರ ಮಕ್ಕಳಪಾಲಿನ ಆಸರೆಯ ಅರಮನೆಯಾಗಿದೆ, ತಾವು ಕೆಲಸಕ್ಕೆ ಹೋದಾಗ ಪುಟ್ಟ ಕೂಸುಗಳನ್ನು ಸಾಕುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಪೋಷಕರಿಗೆ ಈ ಸಮಸ್ಯೆ ನಿವಾರಣೆಯಾಗಿದೆ ಗ್ರಾಮದ ಕೂಸಿನ ಮನೆಯಲ್ಲಿ ಇಲ್ಲಿ 6 ತಿಂಗಳಿಂದ 3 ವರ್ಷದೊಳಗಿನ ಸುಮಾರು 20 ಕ್ಕೂ ಹೆಚ್ಚು ಮಕ್ಕಳನ್ನು ಆರೈಕೆ ಮಾಡಲಾಗುತ್ತದೆ ನಮ್ಮ ಕೂಸಿನ ಮನೆಯ ಮಕ್ಕಳು ಸದಾ ಕಾಲ ಆರೋಗ್ಯದಿಂದಿರಲು ಪೌಷ್ಟಿಕಾಂಶದ ಆಹಾರ ನೀಡುವ ನಿಟ್ಟಿನಲ್ಲಿ ಇಲಾಖೆಯ ಆದೇಶದಂತೆ ಸೋಮವಾರ ಉಪ್ಪಿಟ್ಟು, ಮಂಗಳವಾರ ಖಾರಾಪೊಂಗಲ್, ಬುಧವಾರ ಮೊಸರನ್ನ, ಗುರುವಾರ ತರಕಾರಿ ಕಿಚಡಿ, ಶುಕ್ರವಾರ ಉಪ್ಪಿಟ್ಟು, ಶನಿವಾರ ಸಿಹಿಪೊಂಗಲ್ ಜೊತೆಗೆ ವಾರಕ್ಕೆ ಮೂರು ದಿನ ಮೊಟ್ಟೆ ಹಾಗೂ ಪ್ರತಿದಿನ ಬೆಳಗ್ಗೆ 11 ಕ್ಕೆ ಹಾಲು ಮಧ್ಯಾಹ್ನ 1:00 ಗಂಟೆಗೆ ಮೆನುವಿನಂತೆ ಆಹಾರ ನೀಡಿ ಸಂಜೆ ಮಕ್ಕಳನ್ನು ಬಿಡುವ ಸಮಯದಲ್ಲಿ ರಾಗಿ ಅಥವಾ ಅಕ್ಕಿ ಇಂದ ಮಾಡಿದ ರುಚಿಕರ ದಾವಣಗೆರೆ ಮಿಕ್ಸ್ ಲಾಡು ನೀಡಲಾಗುವುದು ಎಂದು ಕೂಸಿನ ಮನೆಯ ಕೇರ್ ಟೇಕರ್‌ಗಳಾದ ಶ್ವೇತ ಮತ್ತು ಜಲಜಾಕ್ಷಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಂ.ಪಂ., ಪಿ.ಡಿ.ಓ ಮೋಹನ್ ಕುಮಾರ್, ಗ್ರಾಂ.ಪಂ ಕಾರ್ಯದರ್ಶಿ ಭಾಗ್ಯಮ್ಮ, ಕರವಸೂಲಿಗಾರ ಸಿದ್ದರಾಜು ಉಪಸ್ಥಿತರಿದ್ದರು.
ಪಿ.ಡಿ.ಓ ಮೋಹನ್ ಕುಮಾರ್ ಮಾತನಾಡಿ ಕೂಸಿನ ಮನೆ ಯೋಜನೆಯ ಯಶಸ್ವಿಯ ಕುರಿತು ರಾಜ್ಯದಲ್ಲಿ ಕೂಸಿನ ಮನೆ ಯಾವ ರೀತಿಯಲ್ಲಿ ಇರಬೇಕು ಹಾಗೂ ಮಕ್ಕಳಿಗೆ ಯಾವ ಗುಣಮಟ್ಟದಲ್ಲಿ ಆರೈಕೆ ಮಾಡಬೇಕು ಎಂದು ಮಾದರಿಯಾಗಿ ಕೂಸಿನ ಮನೆಯ ವೀಡಿಯೋ ಚಿತ್ರೀಕರಣ ಮತ್ತು ಪೋಷಕರ ಹಾಗೂ ಸಿಬ್ಬಂದಿಗಳ ಅಭಿಪ್ರಾಯ ಸಂಗ್ರಹಿಸಲು ಇಂದು ಆರ್.ಡಿ.ಪಿ.ಆರ್ ಇಲಾಖೆಯ ತಂಡ ನಮ್ಮ ಟಿ.ಬೇಗೂರು ಕೂಸಿನ ಮನೆ ಕೇಂದ್ರಕ್ಕೆ ಆಗಮಿಸಿದ್ದರು. ತಾಲ್ಲೂಕಿನಲ್ಲೇ ಹೈಟೆಕ್ ವ್ಯವಸ್ಥೆಯುಳ್ಳ ಟಿ.ಬೇಗೂರಿನ ಕೂಸಿನ ಮನೆಯಲ್ಲಿ ಮಕ್ಕಳ ಮೇಲೆ ನಿಗಾವಹಿಸಲು 24/7 ರೆಕಾರ್ಡಿಂಗ್ ವ್ಯವಸ್ಥೆ ಇರುವಂತಹ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಿದ್ದು ಮಕ್ಕಳಿಗೆ ಕುಡಿಯಲು ಆರ್.ಓ ಪ್ಯೂರಿಫೈರ್ ನೀರಿನ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ ಅಚ್ಚು ಕಟ್ಟಾದ ಅಡುಗೆ ಮನೆ ರುಚಿ-ಶುಚಿಯಾದ ಆಹಾರದ ಜೊತೆಗೆ ಮಕ್ಕಳಿಗೆ ನೆಲದ ಮೇಲೆ ಕೂರಲು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಫೋಂ ಪ್ಲೇ ಫ್ಲೋರ್ ಮ್ಯಾಟ್ ಅಳವಡಿಸಿದ್ದು ಮಕ್ಕಳು ಆಯ ತಪ್ಪಿ ಬಿದ್ದರೂ ಸಹ ಪೆಟ್ಟಾಗದಂತೆ ರಕ್ಷಿಸುವುದರ ಜೊತೆಗೆ ಮಕ್ಕಳಿಗೆ ಶುಚಿಯಾದ ಶೌಚಾಲಯ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ ಇನ್ನು ಕಲಿಕೆಯೊಂದಿಗೆ ಆಟವಾಡಲು ಉತ್ತಮ ಗುಣಮಟ್ಟದ ಆಟಿಕೆಗಳನ್ನು ಸಹ ಮಕ್ಕಳಿಗೆ ನಮ್ಮ ಗ್ರಾಮ ಪಂಚಾಯತಿ ವತಿಯಿಂದ ಒದಗಿಸಲಾಗಿದೆ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಮನೊರಂಜನೆಯ ಜೊತೆಗೆ ಕಲಿಕೆಗೆ ಅನುಕೂಲವಾಗುವಂತೆ ಡಿಜಿಟಲ್ ಮಾದರಿಯಲ್ಲಿ ಕಾರ್ಟೂನ್ ಮೂಲಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪೋಷಕರ ಹೇಳಿಕೆ:
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕೂಸಿನ ಮನೆ ಯೋಜನೆಯಿಂದ ಕೆಲಸಕ್ಕೆ ತೆರಳುವ ನಮ್ಮಂತಹ ಲಕ್ಷಾಂತರ ಕುಟುಂಬಗಳಿಗೆ ಬಹಳ ಉಪಕಾರಿಯಾಗಿದೆ ಕೂಸಿನ ಮನೆಯಲ್ಲಿ ಆಟ ಪಾಠದೊಂದಿಗೆ ಶುಚಿಯಾದ ರುಚಿಕರವಾದ ಪೌಷ್ಠಿಕ ಆಹಾರ ನೀಡುತ್ತಿರುವುದರಿಂದ ಬಹಳ ಸಂತೋಷವಾಗುತ್ತಿದೆ ಮಕ್ಕಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿರುವ ನಮ್ಮ ಟಿ.ಬೇಗೂರು ಗ್ರಾಮದ ಕೂಸಿನ ಮನೆಯಲ್ಲಿ ಸಿಬ್ಬಂದಿಗಳು ಮಕ್ಕಳನ್ನು ಬಹಳ ಜಾಗರೂಕತೆಯಿಂದ ಲಾಲನೆ ಪಾಲನೆ ಮಾಡುತ್ತಿದ್ದಾರೆ ಇದರಿಂದಾಗಿ ನಾವುಗಳು ನಿಷ್ಚಿಂತೆಯಿಂದ ಹೊರಗಡೆ ಕೆಲಸ ಮಾಡಲು ಸಹಕಾರಿಯಾಗಿದೆ, ಖಾಸಗಿ ಪ್ಲೇ ಹೋಂ ಗಳಿಗೆ ಹೋಲಿಸಿದರೆ ಅಲ್ಲಿಗಿಂತಲೂ ಹೆಚ್ಚಿನ ಸೌಲಭ್ಯವನ್ನು ಹೊಂದಿರುವ ಕೂಸಿನ ಮನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡಲ್ಲಿ ಯೋಜನೆ ಇನ್ನಷ್ಟು ಯಶಸ್ವಿಯಾಗಲಿದೆ ಕೂಸಿನ ಮನೆಯ ಸಮಯವನ್ನು ಸಂಜೆ 5:00 ಗಂಟೆಯ ವರೆಗೂ ವಿಸ್ತರಿಸಿದಲ್ಲಿ ಇನ್ನಷ್ಟು ಉಪಯೋಗವಾಗಲಿದೆ ಎಂದು ಪೋಷಕರಾದ ಡಿ.ಎಸ್. ಕವನ ಅಭಿಪ್ರಾಯ ವ್ಯಕ್ತಪಡಿಸಿದರು.
- ಕರುನಾಡ ಕಂದ



















