ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೌದ್ಧರಾಗೋದು ಅಷ್ಟು ಸುಲಭದ ಮಾತೇ!?

ವೈಶಾಖ ಹುಣ್ಣಿಮೆ, ಸೃಷ್ಟಿಯ ಇತಿಹಾಸದಲ್ಲೇ ಅತಿ ವಿಶಿಷ್ಟವಾದ ಹುಣ್ಣಿಮೆ. ಎಲ್ಲ ಎಲ್ಲೆಗಳನ್ನೂ ದಾಟಿ, ಭೂಮಿಯ ಎಲ್ಲ ಭಾಗವನ್ನೂ ತಲುಪಿದ ಬುದ್ಧನೆಂಬ ಬೆಳಕು ಹುಟ್ಟಿದ್ದು, ಜ್ಞಾನೋದಯ ಪಡೆದಿದ್ದು, ಕಾಲಗರ್ಭಕ್ಕೆ ಮರಳಿದ್ದು – ಈ ಮೂರೂ ಘಟನೆಗಳು ನಡೆದಿದ್ದು ವೈಶಾಖ ಹುಣ್ಣಿಮೆಯಂದೇ.

ಬುದ್ಧನ ಕತೆಗಳು ಅನೇಕ. ಅವು ಏನಿದ್ದರೂ ಆತ ನಮ್ಮ ನೆಲದಲ್ಲಿ ಬೇರೂರಿ ಕಳೆಯಂತೆ ಹಬ್ಬುತ್ತಿದ್ದ ಆರ್ಯರ ಆಚರಣೆಗಳ ವಿರುದ್ಧ ನಿಂತಿದ್ದು ಒಟ್ಟು ಸಾರಾಂಶ. ‘ಕೃಣ್ವಂತೋ ವಿಶ್ವಮಾರ್ಯಂ’ ಎಂದು ಹೊರಟು ಭಾರತದವರೆಗೂ ಬಂದು ಪೂರ್ವಕ್ಕೆ ಹಬ್ಬಲು ಹವಣಿಸುತ್ತಿದ್ದವರನ್ನು ಶಾಕ್ಯಮುನಿ ಗೌತಮ ಅಡ್ದಗಟ್ಟಿದ, ತನ್ನ ವಿಚಾರಗಳಿಂದ.

ವೈದಿಕ ಕಾಲಮಾನದಲ್ಲಿ ಬುದ್ಧ ಮೋಕ್ಷ ಹೊಂದಲಿಕ್ಕೆ ಜೀವಿಗಳನ್ನು ಬಲಿಕೊಟ್ಟು ಯಜ್ಞ ಮಾಡಬೇಕಿಲ್ಲ ಅಂದ. ಆದ್ದರಿಂದಲೇ ವೇದ ವಿರೋಧಿ ಅನಿಸಿಕೊಂಡ. ಮುಂದೆ ಪುರೋಹಿತ ವರ್ಗ (ಬ್ರಾಹ್ಮಣ, ರಾಜ ಮತ್ತು ವ್ಯಾಪಾರಿಗಳ ಕೂಟ) ವೇದಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತ, ಜನಪದ ನಂಬಿಕೆಗಳನ್ನೆಲ್ಲ ಕದ್ದು ಕಲಸುಮೇಲೋಗರ ಮಾಡಿ ಪುರಾಣಗಳನ್ನು ಬರೆಯಿತಲ್ಲ… ಆಗ ಬುದ್ಧನ ‘ವೇದ ವಿರೋಧಿ’ ಪಟ್ಟವನ್ನು ಗಟ್ಟಿಯಾಗಿ ಹಿಡಿದುಕೊಂಡು ಆತನ ಪ್ರಭಾವ ತಗ್ಗಿಸುವ ಸಾಹಸ ನಡೆಯಿತು. ವಿಷ್ಣು ಪಾರಮ್ಯ ಎತ್ತಿ ಹಿಡಿಯುವ ಪುರಾಣಗಳಲ್ಲಿ ಭಾರತದ ಜನಪದರ ದೈವ ಶಿವನನ್ನು ಎರಡನೇ ದರ್ಜೆಗೆ ಇಳಿಸುವ ಜೊತೆಗೇ ಭಾರತದ ಆಧ್ಯಾತ್ಮಿಕ ನಾಯಕ, ಮಹಾಗುರು ಬುದ್ಧನನ್ನೂ ಕೆಳಗಿಳಿಸುವ ಯತ್ನ ನಡೆಸಲಾಯಿತು.

ಉದಾಹರಣೆಗೆ ಅಗ್ನಿಪುರಾಣದ ಕತೆಯನ್ನೇ ನೋಡಿ. ಅದು ಬುದ್ಧನನ್ನು ವಿಷ್ಣುವಿನ ಅಂಶಾವತಾರವೆಂದೂ, ಶುದ್ಧೋದನನ ಮಗನಾಗಿ ಹುಟ್ಟಿದ ಈ ಅವತಾರಿ ಬೇಕೆಂದೇ ಅಸುರರ ದಿಕ್ಕು ತಪ್ಪಿಸಿ, ಅವರನ್ನು ವೇದಗಳಿಂದ ವಿಮುಖಗೊಳಿಸಿ ಅವರು ನರಕ ಸೇರುವ ಹಾಗೆ ಮಾಡಿದನೆಂದೂ ಹೇಳುತ್ತದೆ! (ಅಸುರರಿಂದ ವೇದಗಳನ್ನು ಕಸಿದು ನರಕಕ್ಕೆ ತಳ್ಳಿದ ಕುಟಿಲ ಅವತಾರಿಯನ್ನಾಗಿ ಮಾಡಿದ್ದಾರೆ ನಮ್ಮ ಬುದ್ಧನನ್ನು!!)

ಆದರೆ ಶೈವರು ಹಾಗಲ್ಲ. ವಾಸ್ತವದಲ್ಲಿ ವೈಷ್ಣವರು ಶೈವರನ್ನು ‘ಪ್ರಚ್ಚನ್ನ ಬೌದ್ಧ’ರೆಂದೇ ಕರೆಯುತ್ತಿದ್ದರು. ಅದಕ್ಕೆ ಸರಿಯಾಗಿ ಶೈವರಿಗೂ ಬೌದ್ಧರಿಗೂ ಒಂದು ಅಂಡರ್’ಸ್ಟಾಂಡಿಂಗ್, ಒಂದು ಪ್ರೀತಿಯ ಬಾಂಧವ್ಯ ಇದ್ದಂತೆ ತೋರುತ್ತದೆ. ಹಾಗೆಂದೇ ನೇಮಿರಾಜ ತನ್ನ ನೇತ್ರ ತಂತ್ರದಲ್ಲಿ ಬುದ್ಧನನ್ನು “ಸ್ತ್ರೀಯರಿಗೆ ಮೋಕ್ಷ ಕರುಣಿಸುವ ಮಹಾತ್ಮ”ನೆಂದು ಶಿವನ ಬಾಯಿಂದ ಹೇಳಿಸಿದ್ದಾನೆ.

ಭಾರತದಲ್ಲಿ ಬುದ್ಧನ ಚಿಂತನೆಗಳ ಮೇಲೆ ಪ್ರಹಾರ ನಡೆಸಿದರೆ, ಭಾರತದ ಬಗಲಿನ ದೇಶಗಳಲ್ಲಿ ಅವನ ವಿಹಾರಗಳ ಮೇಲೆ, ವಿಗ್ರಹಗಳ ಮೇಲೆ, ಕೊನೆಗೆ ಅನುಯಾಯಿಗಳ ಮೇಲೂ ಭೌತಿಕ ಪ್ರಹಾರ ನಡೆಸಿ ನಾಶಗೈಯುವ ಪ್ರಯತ್ನ ನಡೆದವು. ಪಶ್ಚಿಮದಲ್ಲಿ ಬುದ್ಧನ ಬದುಕಿನ ವಿವರಗಳನ್ನು ಏಸುಕ್ರಿಸ್ತನ ಬದುಕಿನ ವಿವರಗಳಾಗಿ ಸೇರಿಸಿ ನಿಜವಾಗಿಯೂ ಮತ್ತೊಬ್ಬ ಬುದ್ಧನೇ ಆಗಿದ್ದ ಏಸುವಿನ ಕತೆ ಬರೆಯಲಾಯಿತು. ಏಸು ಕ್ರಿಸ್ತನ ಔದಾರ್ಯ ಬುದ್ಧತ್ವಕ್ಕೆ ತಕ್ಕುದೇ ಆಗಿದ್ದರೂ ಇದರಿಂದ ಬುದ್ಧನ ವ್ಯಾಪಕ ಪ್ರವೇಶವನ್ನು ಯಶಸ್ವಿಯಾಗಿ ತಡೆದಿದ್ದು ಸುಳ್ಳಲ್ಲ.

ಇಷ್ಟೆಲ್ಲ ಆದರೂ ಬುದ್ಧ ಜಗತ್ತಿನ ಉದ್ದಗಲ ತಲುಪಿದ್ದು ಸರಳತೆಯಿಂದ. ಯಾವುದೇ ರಿವಾಜುಗಳಿಲ್ಲದೆ, ದೈನಂದಿನ ಆಚರಣೆಗಳು ಬೇಕಿಲ್ಲದೆ, ಕೇವಲ ಮತ್ತು ಕೇವಲ ಬುದ್ಧನ ಚಿಂತನೆಗಳನ್ನು ಒಪ್ಪಿ, ಅನುಸರಿಸಲು ಯತ್ನಿಸುವ ಮಾತ್ರದಿಂದ ಯಾವುದೇ ವ್ಯಕ್ತಿ ಬೌದ್ಧರಾಗಬಹುದು; ಬುದ್ಧನ ಅನುಯಾಯಿ ಆಗಬಹುದು, ಅದು ಕೂಡಾ ತಾನು ಹುಟ್ಟಿನಿಂದ ಪಡೆದ ಮತ-ಧರ್ಮದ ಗುರುತು ಕಳೆದುಕೊಳ್ಳದೆ.

ಹಾಗೊಮ್ಮೆ ಯಾರಾದರೂ ಆ ಗುರುತುಗಳನ್ನು ಕಳೆದುಕೊಂಡು ಬೌದ್ಧರಾಗುವುದೇ ಆದರೆ, ಅಂಥವರನ್ನು ಬೌದ್ಧ ಧರ್ಮ ಕೈಚಾಚಿ ಅಪ್ಪಿಕೊಳ್ಳುತ್ತದೆ. ಅಲ್ಲಿ ಒತ್ತಾಯವಿಲ್ಲ, ಬೆದರಿಕೆ ಇಲ್ಲ, ಸಾಂಸ್ಥಿಕವಾಗಿ ತನ್ನವರ ಸಂಖ್ಯೆ ಎದ್ದು ತೋರಬೇಕೆನ್ನುವ ಹಪಾಹಪಿ ಇಲ್ಲ. ಆದ್ದರಿಂದಲೇ ಸಾವಿರಾರು ವರ್ಷಗಳ ಕಾಲ ಬೌದ್ಧ ಧರ್ಮ ಹಲವು ಹೇರುಗಳನ್ನು ಹೊತ್ತು ಬದಲಾಗುತ್ತ ನಡೆದಿದ್ದರೂ ಅದರ ಆತ್ಮ ಮುಕ್ಕಾಗದೆ ಉಳಿದುಕೊಂಡಿದೆ. ಇವತ್ತಿಗೂ ಬೌದ್ಧ ಧರ್ಮದಲ್ಲಿ ಬುದ್ಧ ಹೃದಯ ಉಳಿದುಕೊಂಡಿದೆ.

ನಾವು ಬುದ್ಧನೆನ್ನುವ ಬುದ್ಧ ಕೇವಲ 80 ವರ್ಷ ಬದುಕಿದ್ದ ಸಮಣ. ಅವನು ಸಂಘ ಸ್ಥಾಪಿಸಿದ್ದು ಧ್ಯಾನ ವಿಧಾನಗಳನ್ನು ಹೇಳಿಕೊಡಲಿಕ್ಕೆ, ಸತ್ಯ, ಅಹಿಂಸೆ, ಶೀಲ, ಸಹಜತೆಯೇ ಮೊದಲಾದ ಸರಳ – ನೇರ ಬದುಕಿನ ವಿಧಾನ ರೂಢಿ ಮಾಡಿಸಲಿಕ್ಕೆ. ತಾರತಮ್ಯ ಹೋಗಲಾಡಿಸಲಿಕ್ಕೆ, ಮೋಕ್ಷ ಹೊಂದಲು ಮತ್ಯಾವುದೋ ಪ್ರಾಣಿಯ ತಲೆ ಕಡಿಯಬೇಕಿಲ್ಲ, ನಿಮ್ಮ ನಿಮ್ಮ ತಲೆ ಶಾಂತವಾಗಿದ್ದರೆ ಸಾಕು ಎಂದು ಮನದಟ್ಟು ಮಾಡಿಸಲಿಕ್ಕೆ.

ನಾವು ಧರ್ಮ ಅನ್ನುವ ಬೌದ್ಧ ಧರ್ಮ ಮೂಲದಲ್ಲಿ ಇವಿಷ್ಟೇ.

ಆದರೆ ಇವತ್ತು ದೇವ – ದೇವತೆಗಳ ರೂಪದಲ್ಲಿ, ಯಕ್ಷ – ಕಿಂಕರ ವೇಷದಲ್ಲಿ, ಬೋಧಿಸತ್ವರಾಗಿ, ತಂತ್ರಸಾಧಕರಾಗಿ, ಹಲವು ಸೂತ್ರ – ಹಲವು ಪಠ್ಯಗಳ ಪುಸ್ತಕ ರೂಪದಲ್ಲೆಲ್ಲ ಕಂಡುಬರುವುದು ಬುದ್ಧನ ನಂತರದ್ದು; ಅನುಯಾಯಿಗಳ ಸೃಷ್ಟಿ ಮಾತ್ರ.

ಆದ್ದರಿಂದಲೇ, ನಿರೀಶ್ವರವಾದಿ ಬುದ್ಧನ ಧರ್ಮದಲ್ಲಿ ಗಣೇಶ, ಅವಲೋಕಿತೇಶ, ತಾರಾ, ಅಮಿತಾಭ ಇತ್ಯಾದಿ ಇತ್ಯಾದಿ ಎಷ್ಟೊಂದು ದೇವರು, ಎಷ್ಟೊಂದು ಆಕಾರಗಳು! ಪೂಜಾ ವಿಧಾನಗಳು, ವಾದ್ಯಗಳು, ನರ್ತನಗಳು, ದೊಡ್ಡ ದೊಡ್ಡ ಗೋಪುರದ ಮಹಾದೇಗುಲಗಳು, ಅವುಗಳಲ್ಲಿ ಬಹುತೇಕ ಚಿನ್ನದ ಬುದ್ಧ ವಿಗ್ರಹಗಳು!!

ಬುದ್ಧನ ಬೋಧನೆಗಳ ಸರಳತೆ, ಜನಸಾಮಾನ್ಯರಿಗೆ ಸಹ್ಯವಾಗದೆ ಹೋಗಿದ್ದೇ ಈ ಎಲ್ಲ ಬೆಳವಣಿಗೆಗೆ ಕಾರಣ. ಬೌದ್ಧರಾಗುವುದು ಸುಲಭವೇ ಆದರೂ, ಸುಲಭವಾದದ್ದು ಎಲ್ಲರಿಗೂ ಸಾಧ್ಯವಾಗುವುದಿಲ್ಲವಲ್ಲ!

ಜನರಿಗೆ… ನಮಗೆ, ರೋಚಕತೆ ಬೇಕು. ಸ್ವರ್ಗ ನರಕಗಳು ಬೇಕು. ದೇವರು ದಿಂಡರು ಬೇಕು. ವರದಾನ – ಶಾಪಗಳು ಬೇಕು. ನಮ್ಮ ಅಹಂಕಾರಕ್ಕೆ ಸವಾಲು ಹಾಕುವ ಆಚರಣೆಗಳು ಬೇಕು. ಆದರೆ ಬುದ್ಧನ ಬೋಧನೆಗಳಲ್ಲಿ ಇದ್ಯಾವುದೂ ಇಲ್ಲ.

  • ಸುಧೀಂದ್ರ ಡಿ ಅರಕಲಗೂಡು
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!