ಬೆಂಗಳೂರು ಗ್ರಾಮಾಂತರ/ ನೆಲಮಂಗಲ: ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಆಯಿಲ್ ಗೋದಾಮು – 30 ಕೋಟಿ ಮೌಲ್ಯದ ಎಣ್ಣೆ ಬೆಂಕಿಗಾಹುತಿ, ಯುದ್ಧ ಭೀತಿಯಿಂದ ಶೇಖರಿಸಿದ್ದ ಎಣ್ಣೆ ಸಂಪೂರ್ಣ ನಾಶ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅಡಕಮಾರನಹಳ್ಳಿ ಬಳಿ ಭಾರೀ ಅಗ್ನಿ ಅವಘಡ ಸಂಭವಿಸಿ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಈ ಬೆಂಕಿಯಿಂದ, ಶೆಲ್ ಕಂಪನಿಗೆ ಸೇರಿದ ಎಣ್ಣೆ (ಆಯಿಲ್) ಗೋದಾಮು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಘಟನೆಯು ಮಂಗಳವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಸಂಭವಿಸಿದ್ದು, ನೆಲಮಂಗಲ, ಪೀಣ್ಯ, ಯಶವಂತಪುರ ಸೇರಿದಂತೆ ವಿವಿಧ ಭಾಗಗಳಿಂದ ಬಂದ 8ಕ್ಕಿಂತ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿವೆ.
ಈ ಗೋದಾಮು ಸುಮಾರು 40,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಇದರೊಳಗೆ ಸಾರ್ವಜನಿಕ ಹಾಗೂ ಕೈಗಾರಿಕಾ ಬಳಕೆಯ ಅನೇಕ ಬಗೆಯ ಎಣ್ಣೆ ಉತ್ಪನ್ನಗಳು ಶೇಖರಿಸಲ್ಪಟ್ಟಿದ್ದವು. ಘಟನೆಯ ಪ್ರಭಾವದಿಂದಾಗಿ ಬೆಂಕಿಯ ರೋದನ ಕ್ಷಣಕ್ಷಣಕ್ಕೂ ವಿಸ್ತಾರವಾಗುತ್ತಿದ್ದು, ಗೋದಾಮು ಜತೆಗೆ ಹೊಂದಿಕೊಂಡಿದ್ದ ಇತರ ಕಟ್ಟಡಗಳಿಗೆ ಬೆಂಕಿ ಹರಡುವ ಆತಂಕವೂ ವ್ಯಕ್ತವಾಗಿದೆ. ಸ್ಥಳೀಯ ನಿವಾಸಿಗಳು ಹಾಗೂ ಉದ್ಯಮಿಗಳು ಬೆಚ್ಚಿಬಿದ್ದಿರುವ ದೃಶ್ಯಗಳು ಕಂಡುಬಂದಿವೆ.
ಈ ಗೋದಾಮು ಬಾಡಿಗೆಗೆ ಪಡೆದಿದ್ದ ಸಂಸ್ಥೆಯು, ಭಾರತ – ಪಾಕಿಸ್ತಾನ ನಡುವಿನ ವ್ಯಾಪ್ತಿಯ ಯುದ್ಧ ಭೀತಿಯಿಂದಾಗಿ ರಾಜ್ಯದಲ್ಲಿ ಆಯಿಲ್ ಕೊರತೆ ಉಂಟಾಗದಂತೆ ಮುಂಚಿತವಾಗಿ ಸಾಕಷ್ಟು ಪ್ರಮಾಣದಲ್ಲಿ ಸ್ಟಾಕ್ ಶೇಖರಣೆ ಮಾಡಿತ್ತು. ಕೇಂದ್ರ ಸರ್ಕಾರದಿಂದ ಹಾಗೂ ಕಚೇರಿಯಿಂದ ಬಂದ ಸೂಚನೆಗಳ ಪ್ರಕಾರ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಾಗಿ ಆಯಿಲ್ ಸಂಗ್ರಹಿಸಲಾಗಿತ್ತು. ಆದರೆ, ಈ ಬೆಂಕಿ ಅವಘಡದಿಂದಾಗಿ ಅದರ ಪೂರ್ತಿ ನಾಶವಾಗಿರುವ ಸಾಧ್ಯತೆಗಳಿವೆ. ಈಗಾಗಲೇ ಸುಮಾರು ₹30 ಕೋಟಿ ಮೌಲ್ಯದ ಆಯಿಲ್ ಬೆಂಕಿಗೆ ಆಹುತಿಯಾಗಿದೆ ಎಂಬ ಅಂದಾಜು ವ್ಯಕ್ತವಾಗಿದೆ.
ಈ ಗೋದಾಮಿನ ಮಾಲೀಕರಾಗಿ ಕಂದಾಯ ಖಾತೆಯ ಮಾಜಿ ಸಚಿವ ಹೆಚ್. ಸಿ. ಶ್ರೀಕಂಠಯ್ಯ ಅವರ ಅಳಿಯ ಕೃಷ್ಣಪ್ಪ ಎಂಬವರನ್ನು ಗುರುತಿಸಲಾಗಿದ್ದು, ಅವರು ಈ ಗೋದಾಮನ್ನು ಶೆಲ್ ಕಂಪನಿಗೆ ಬಾಡಿಗೆಗೆ ನೀಡಿದ್ದರು. ಕಂಪನಿ ತನ್ನ ಉತ್ಪನ್ನಗಳ ಹಂಚಿಕೆಗಾಗಿ ಈ ಸ್ಥಳವನ್ನು ಮುಖ್ಯ ಗೋದಾಮು ಕೇಂದ್ರವನ್ನಾಗಿ ಬಳಸಿಕೊಂಡು ಇತ್ತಿಚೆಗೆ ಹೆಚ್ಚಿನ ಪ್ರಮಾಣದ ಎಣ್ಣೆ ಸಂಗ್ರಹ ಮಾಡಿತ್ತು.
ಘಟನೆಯ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳ ಬೆಂಕಿ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅಗ್ನಿಕಾಂಡ ಸಂಭವಿಸಿದೆ ಎಂಬ ಪ್ರಾಥಮಿಕ ಶಂಕೆ ಇದೆ. ಆದರೆ, ಸ್ಫೋಟಕ ರಾಸಾಯನಿಕಗಳು ಇದ್ದ ಕಾರಣದಿಂದಾಗಿ ಬೆಂಕಿಯ ವಿಸ್ತರಣೆ ವೇಗವಾಗಿ ಆಗಿದೆ.
ಸ್ಥಳೀಯ ಜನತೆ ಮತ್ತು ವ್ಯಾಪಾರಸ್ಥರು ಈ ಘಟನೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ತರದ ಕೈಗಾರಿಕಾ ಗೋದಾಮುಗಳು ಜನವಸತಿಯ ಹತ್ತಿರ ಇರಬಾರದು ಎಂಬ ಬೇಡಿಕೆ ಕೂಡ ಕೇಳಿ ಬರುತ್ತಿದೆ. ಸರ್ಕಾರದಿಂದ ಸೂಕ್ತ ಪರಿಹಾರ ಕ್ರಮಗಳು ಕೈಗೊಳ್ಳಬೇಕು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕಟ್ಟುನಿಟ್ಟಾದ ನಿಯಮಾವಳಿ ರೂಪಿಸಬೇಕು ಎಂಬ ಒತ್ತಾಯವೂ ವ್ಯಕ್ತವಾಗಿದೆ.
- ಕರುನಾಡ ಕಂದ
