ಬಳ್ಳಾರಿ / ಕಂಪ್ಲಿ : ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಮಸಣ ಕಾರ್ಮಿಕರ ಸಂಘದಿಂದ ದೇವದಾಸಿ ಮಹಿಳೆಯರಿಗೆ ಮತ್ತು ಮಸಣ ಕಾರ್ಮಿಕರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿ ಪಟ್ಟಣದ ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ಕೆ. ದುರುಗಣ್ಣ ಇವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಕಾರ್ಯದರ್ಶಿ ಎ. ಸ್ವಾಮಿ ಮಾತನಾಡಿ, ಪುರಸಭೆವ್ಯಾಪ್ತಿಗೆ ಬರುವ ದೇವದಾಸಿ ಮಹಿಳೆಯರಾಗಿದ್ದು ಮತ್ತು ದೇವದಾಸಿ ಮಹಿಳೆ ಕುಟುಂಬದ ಸದಸ್ಯರಾಗಿರುತ್ತೇವೆ, ನಾವು ನಮ್ಮ ಕುಟುಂಬದ ಜೀವನ ನಿರ್ವಹಣೆಗಾಗಿ ಯಾವುದೇ ರೀತಿ ಆಸ್ತಿ ಪಾಸ್ತಿಗಳನ್ನು ಹೊಂದಿರುವುದಿಲ್ಲ. ಅದೇ ರೀತಿ ನಮ್ಮಗಳ ತಂದೆ ತಾಯಿಯಿಂದಲೂ ನಮಗೆ ಯಾವುದೇ ರೀತಿ ಆಸ್ತಿ ಇರುವುದಿಲ್ಲ. ನಾವು ಮಾಡುವ ಕೂಲಿ ಕೆಲಸದಿಂದಾಗಿ ಈಗ ನಮಗಿರುವ ಆದಾಯದಲ್ಲಿ ಹೊಸ ಮನೆ ಕಟ್ಟಿಕೊಳ್ಳಲಾಗುತ್ತಿಲ್ಲ. ಒಂದೇ ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸ ಮಾಡುವಂತಾಗಿದೆ. ಆದಾಯದ ಕೊರತೆಯಲ್ಲಿಯೆ ಕುಟುಂಬ ಜೀವನ ನಡೆಸುತ್ತಾ ಬಂದಿದ್ದು, ಮತ್ತು ಈಗಿನ ಬೆಲೆ ಏರಿಕೆಯ ಸಂದರ್ಭದಲ್ಲಿ ಹೊಟ್ಟೆ ಹೊರೆಯುವುದೇ ಕಷ್ಟವಾಗಿದೆ ಮನೆಯ ಜಾಗ, ನಿವೇಶನ ಖರೀದಿಸುವ ಶಕ್ತಿ ಇರುವುದಿಲ್ಲ. ಆದ್ದರಿಂದ ಸರ್ಕಾರವೇ ನಮ್ಮ ಕುಟುಂಬವು ಈ ದೌರ್ಜನ್ಯದ ದೇವದಾಸಿ ಪದ್ಧತಿ ಹಾಗೂ ಜಾತಿ, ಅಸ್ಪೃಶ್ಯಾಚರಣೆಯ ಪದ್ಧತಿ ಮತ್ತು ಬಡತನದಿಂದ ಹೊರಬರಲು ಸಾಧ್ಯವಾಗುವಂತೆ ಗೌರವದ ಬದುಕು ಕಟ್ಟಿಕೊಳ್ಳುವುದಕ್ಕೆ ನಿವೇಶನ ಸಹಿತ ಮನೆಯನ್ನು ಕಟ್ಟಿಸಿ ಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಜಾನಕಿ, ಹುಲಿಗೆಮ್ಮ, ವಿರುಪಮ್ಮ, ರೇಣುಕಮ್ಮ, ಗಾಳಮ್ಮ, ದೊಡ್ಡಹುಲಿಗೆಮ್ಮ, ತಾಯಮ್ಮ, ಎಂ.ಸಿ.ಲಿಂಗಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
