ಬಳ್ಳಾರಿ / ಕಂಪ್ಲಿ : ತಾಲೂಕಿನ ಮೆಟ್ರಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ನಾಗಮ್ಮ ಮತ್ತು ಉಪಾಧ್ಯಕ್ಷರಾಗಿ ಮಹಾಂತೇಶ ಇವರು ಅವಿರೋಧವಾಗಿ ಆಯ್ಕೆಗೊಂಡರು.
ಇಲ್ಲಿನ ಗ್ರಾ. ಪಂ. ಯ ಕಚೇರಿಯಲ್ಲಿ ಇತ್ತೀಚೆಗೆ ತೆರವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾಧಿಕಾರಿ (ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ) ಆರ್.ಕೆ. ಶ್ರೀಕುಮಾರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ಮಂಗಳವಾರ ನಡೆಯಿತು. ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿಯ ಅಧ್ಯಕ್ಷ ಸ್ಥಾನಕ್ಕೆ ನಾಗಮ್ಮ ಮತ್ತು ಸಾಮಾನ್ಯ ಮೀಸಲಾತಿಯ ಉಪಾಧ್ಯಕ್ಷ ಸ್ಥಾನಕ್ಕೆ ಮಹಾಂತೇಶ ಇವರು ನಾಮಪತ್ರ ಸಲ್ಲಿಸಿದ್ದರು. ಇವರನ್ನು ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸಿದ ಹಿನ್ನಲೆ ಅಧ್ಯಕ್ಷರಾಗಿ ನಾಗಮ್ಮ, ಉಪಾಧ್ಯಕ್ಷರಾಗಿ ಮಹಾಂತೇಶ ಅವಿರೋಧವಾಗಿ ಆಯ್ಕೆಗೊಂಡರು.
ನಂತರ ಆರ್.ಕೆ.ಶ್ರೀಕುಮಾರ ಮಾತನಾಡಿ, ಗ್ರಾ.ಪಂ. ಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಯೊಂದು ಸಹಕಾರದೊಂದಿಗೆ ಮುನ್ನಡೆಯಬೇಕು, ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಸಾಧನೆಗಳು ಅವಿಸ್ಮರಣೀಯವಾಗಬೇಕು ಎಂದರು.
ನೂತನ ಅಧ್ಯಕ್ಷೆ ನಾಗಮ್ಮ ಮತ್ತು ಉಪಾಧ್ಯಕ್ಷ ಮಹಾಂತೇಶ ಮಾತನಾಡಿ, ಗ್ರಾ.ಪಂ. ಯ ಕೊನೆ ಹಂತದ ಅವಧಿಗೆ ನಮಗೆ ಅವಕಾಶ ಮಾಡಿಕೊಟ್ಟಿದ್ದು, ಇರುವ ಅವಧಿಯೊಳಗೆ ಬೀದಿ ದೀಪ, ರಸ್ತೆ, ಚರಂಡಿ ಸ್ವಚ್ಚತೆ ಸೇರಿದಂತೆ ನಾನಾ ಮೂಲಭೂತ ಸೌಲಭ್ಯಗಳನ್ನು ಜನತೆಗೆ ಕಲ್ಪಿಸುವ ಜತೆಗೆ ಗ್ರಾಪಂ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ತದ ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಧಿಕಾರಿ ವೃಂದದವರು ಹಾಗೂ ಸದಸ್ಯರು, ಮುಖಂಡರು ಮಾಲಾರ್ಪಣೆಯೊಂದಿಗೆ ಗೌರವಿಸುವ ಮೂಲಕ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ, ಪಿಡಿಒ ಬೀರಲಿಂಗ, ಕಾರ್ಯದರ್ಶಿ ಹುಲುಗಪ್ಪ, ಗ್ರಾಪಂ ಸದಸ್ಯರಾದ ಸಿ.ಡಿ.ಗುಂಡಮ್ಮ, ಬಿ. ಗಿರೀಶ, ಹೆಚ್.ಹೊನ್ನೂರಮ್ಮ, ಲೋಕೇಶ, ಸಿಂದಿಗೇರಿ ಲಕ್ಷ್ಮಿ, ಟಿ.ನಾಗರತ್ನಮ್ಮ, ಜಯಲಕ್ಷ್ಮಿ, ಎಂ.ಜಡೆಪ್ಪ, ಹೆಚ್. ಕುಮಾರಸ್ವಾಮಿ, ಕುಶಲ ದಾಸರ ಕುಶಾಲಪ್ಪ, ತಿಮ್ಮಪ್ಪ ಹುಡೇದ, ಬಿ.ಮಲ್ಲಮ್ಮ, ಕರಿಬಸಮ್ಮ, ಹನುಮಂತಮ್ಮ, ದೇವೇಂದ್ರ, ಗುಂಡಪ್ಪ, ಅಂಗಡಿ ನಾಗರಾಜ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
