ಹೊಸಪೇಟೆಯಲ್ಲಿ ಜರುಗುವ ಬೃಹತ್ ಸಾಧನಾ ಸಮಾವೇಶಕ್ಕೆ ಆಹ್ವಾನ
ಯಾದಗಿರಿ/ ಗುರುಮಠಕಲ್ : ಸಾರ್ವಜನಿಕರಿಗೆ ಉಪಯೋಗವಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಮಹತ್ವದ ಬಿ ಖಾತೆ ಜಾರಿಗೊಳಿಸಿದ್ದು ಅಧಿಕಾರಿಗಳು ಲೋಪವೆಸಗಿದಲ್ಲಿ ಹಾಗೂ ಅಕ್ರಮ ಲಂಚ ಬೇಡಿಕೆಯಿಟ್ಟರೆ ನಿರ್ಧಾಕ್ಷಿಣ್ಯವಾಗಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ಶ್ರೀ ರಹೀಂ ಖಾನ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಮೂಲಕ ಕಳೆದ 2 ವರ್ಷಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಮೊದಲ ವರ್ಷ 56 ಸಾವಿರ ಮತ್ತು ಪ್ರಸಕ್ತ ವರ್ಷ 60 ಸಾವಿರ ಕೋಟಿ ಒಟ್ಟಾರೆಯಾಗಿ 1.20 ಲಕ್ಷ ಕೋಟಿ ರೂಪಾಯಿಗಳನ್ನು ಫಲಾನುಭವಿಗಳಿಗೆ ಜಮೆ ಮಾಡುವ ಮೂಲಕ ರಾಜ್ಯ ಸರ್ಕಾರ ಜನತೆಗೆ ನೀಡಿದ ಭರವಸೆಯನ್ನು ನೂರಕ್ಕೆ ನೂರರಷ್ಟು ಈಡೇರಿಸಿದೆ.
ನಮ್ಮ ಸರ್ಕಾರ ಪ್ರತಿ ಜಿಲ್ಲೆಗೆ ಕನಿಷ್ಠ 500 ಕೋಟಿ ರೂಪಾಯಿಗಳನ್ನು ಒದಗಿಸಿ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಜಾರಿಗೆ ಬಂದು ಎರಡು ವರ್ಷಗಳಲ್ಲಿ ಯಶಸ್ವಿ ಪಂಚ ಯೋಜನೆಗಳನ್ನು ಜಾರಿಗೊಳಿಸಿ ಜನಮನ ಗೆದ್ದಿದೆ. ಮೇ.20ರಂದು ಹೊಸಪೇಟೆಯಲ್ಲಿ ಬೃಹತ್ ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಸಭೆಗೆ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಕರ್ನಾಟಕದ ಮೂಲೆ ಮೂಲೆಗಳಿಂದ ಕಾಂಗ್ರೆಸ್ ಪಕ್ಷದ ಪಂಚ ಯೋಜನೆಗಳ ಫಲಾನುಭವಿಗಳು ಸರಿ ಸುಮಾರು ಐದು ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಇದೇ ವೇಳೆ ಸುದ್ದಿಗೋಷ್ಠಿ ನಡೆಸಿ ಪತ್ರಕರ್ತರು ಬಿ ಖಾತಾ ಲಂಚಾವತಾರ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ಕರ್ನಾಟಕದಾದ್ಯಂತ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಬಿ ಖಾತೆ ಹಂಚಿಕೆಗೆ ಈಗಾಗಲೇ ಮೂರು ತಿಂಗಳ ಗಡುವು ವಿಸ್ತರಣೆಯಾಗಿದ್ದು ನಗರಸಭೆ ಮಹಾನಗರ ಪಾಲಿಕೆ ಅಥವಾ ಯಾವುದೇ ಇಲಾಖೆಯಲ್ಲಾಗಲಿ ಅವ್ಯವಹಾರ ಕಂಡು ಬಂದಲ್ಲಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಈಗಾಗಲೇ ಅವರ ಮೇಲೆ ಇಸಿ ಮಾನಿಟರ್ ಮಾಡುತ್ತಿದ್ದೇವೆ ಅಂತಹ ಪ್ರಕರಣ ಕಂಡು ಬಂದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆಯ ಬಿಸಿ ಮುಟ್ಟಿಸಿದರು.
ಪುರಸಭೆ ವ್ಯಾಪ್ತಿಯಲ್ಲಿರುವ ಒಳಚರಂಡಿ ವ್ಯವಸ್ಥೆ ನಿರ್ವಹಣೆ ಹದಗೆಟ್ಟಿರುವ ಬಗ್ಗೆ, 30 ವರ್ಷಗಳಿಂದ ಟೆಂಡರ್ ಕರೆಯದ ವಾಣಿಜ್ಯ ಮಳಿಗೆಗಳು, ಮಾಂಸ ಮಳಿಗೆಗಳ ಸ್ಥಳಾಂತರ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು ಪುರಸಭೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆಗೆ ಭೇಟಿ ನೀಡಿದ ಸಚಿವರಿಗೆ ಸದಸ್ಯರು ಸ್ವಾಗತಿಸಿ ಹೆಚ್ಚುವರಿ ಅನುದಾನದ ಕುರಿತಾಗಿ ಮನವಿ ನೀಡಿದರು. ಗುರುಮಠಕಲ್ ತಾಲೂಕ ವಿಕಲಚೇತನರ ಸಂಘದ ತಾಲೂಕ ಅಧ್ಯಕ್ಷ ಸಿದ್ಧನಗೌಡ, ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷ ಶ್ರೀಕಾಂತ್ ತಲಾರಿ, ಭಾಜಪ ಮಂಡಲ ಉಪಾಧ್ಯಕ್ಷ ಜಗದೀಶ್ ಮೇಂಗ್ಜಿ, ದಲಿತ ಸಂಘಟನೆಗಳು ಮನವಿ ಸಲ್ಲಿಸಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸುವಂತೆ ಹಾಗೂ ಅನುದಾನ ನೀಡುವಂತೆ ವಿನಂತಿಸಿದರು.
ಇದಕ್ಕೂ ಮುಂಚೆ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಪುತ್ತಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು.
ಸಚಿವರ ಭೇಟಿಯ ಹಿನ್ನೆಲೆಯಲ್ಲಿ ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಹಾಗೂ ಸೈದಾಪುರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಚಪೆಟ್ಲಾ, ನಿರಂಜನ್ ರೆಡ್ಡಿ, ಕಾಂಗ್ರೆಸ್ ನ ಕೆಪಿಸಿಸಿ ಕಾರ್ಯದರ್ಶಿಗಳಾದ ರಾಜಗೋಪಾಲ್ ರೆಡ್ಡಿ, ನಿತ್ಯಾನಂದ ಬಾಲಪ್ಪ ನಿರೇಟಿ ರವೀಂದ್ರ ರೆಡ್ಡಿ ಸೇರಿ ಬಾಬು ತಲಾರಿ ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸಂಜು ಕುಮಾರ್ ಚಂದಾಪುರ್ ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಮುಖ್ಯ ಅಧಿಕಾರಿಗಳು ಸಿಬ್ಬಂದಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿವಿಧ ಸಂಘಟನೆಗಳ ಅಧ್ಯಕ್ಷರು ಭಾಗವಹಿಸಿದ್ದರು.
” ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರು ಸಪ್ತ ಖಾತೆ ಸಚಿವರಾದ ಬಾಬುರಾವ್ ಚಿಂಚನಸೂರ್ ಅವರನ್ನು ಅಪಪ್ರಚಾರದ ಮೂಲಕ ಚುನಾವಣೆಯಲ್ಲಿ ಸೋಲಿಸಿರಬಹುದು ಆದರೆ ಅವರು ಯಾವುದೇ ಮಂತ್ರಿಗೂ ಕಡಿಮೆ ಇಲ್ಲ ಅವರ ವರ್ಚಸ್ಸು ಮುಖ್ಯಮಂತ್ರಿ ಪ್ರಧಾನ ಮಂತ್ರಿಗಳವರೆಗೂ ಇದೆ, ಅವರು ಸದ್ಯ ನಮ್ಮ ಮಂತ್ರಿ ಇದ್ದ ಹಾಗೆ “.
- ಪೌರಾಡಳಿತ ಮತ್ತು ಹಜ್ ಸಚಿವ ಶ್ರೀ ರಹೀಂ ಖಾನ್
ವರದಿ: ಜಗದೀಶ್ ಕುಮಾರ್ ಭೂಮಾ.
