
ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ದೇವಲಾಪುರ ಗ್ರಾಮದ ಹೊರವಲಯದ ಬಳ್ಳಾರಿ ರಸ್ತೆಯಲ್ಲಿರುವ ಗ್ರಾಮದ ಆರಾಧ್ಯ ದೇವತೆ ಕಣವಿ ಮಾರೆಮ್ಮ ದೇವಿಯ ಎರಡು ದಿನಗಳ ಅದ್ದೂರಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಪ್ರತಿ 9 ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಕಣವಿ ಮಾರೆಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಕೋವಿಡ್-19 ವ್ಯಾಪಕವಾಗಿ ಹರಡಿದ ನಂತರ ಆಚರಣೆ ಮಾಡಬೇಕಿತ್ತು ಆದರೆ ಮಾಡಿರಲಿಲ್ಲ. ಆದರೆ ಇದೀಗ ದೇವಿಯ ಜಾತ್ರಾ ಮಹೋತ್ಸವವನ್ನು ಮೇ.13 ಹಾಗೂ 14 ರಂದು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಿದರು.
ಮೇ.13ರಂದು ಬೆಳಿಗ್ಗೆ 10 ಗಂಟೆಯಿಂದಲೇ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಆರಂಭಿಸಲಾಗಿತ್ತು.ನಂತರ ಸಕಲ ಶಾಸ್ತ್ರ ಸಂಪ್ರದಾಯಗಳೊಂದಿಗೆ ಗಂಗೆ ಪೂಜೆ ಮತ್ತು ಗ್ರಾಮ ದೇವತೆ ಶ್ರೀ ಕಣವಿ ಮಾರೆಮ್ಮದೇವಿಯ ಉತ್ಸವವನ್ನು ವಿಜೃಂಭಣೆಯಿಂದ ಸಕಲ ಮಂಗಳ ವಾದ್ಯಗಳೊಂದಿಗೆ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ, ವಿಶೇಷವಾಗಿ ಡೊಳ್ಳುಗಳ ನಿನಾದದೊಂದಿಗೆ ನಡೆಸಿದರು.
ಮೇ.14ರಂದು ಬೆಳಿಗ್ಗೆ 6-30ರಿಂದ ಮೇಟಿ ಕುಂಭದೊಂದಿಗೆ ಕುಂಭೋತ್ಸವ ಆರಂಭಗೊಂಡಿತು. ಗ್ರಾಮದ ವಿವಿಧ ಸಮುದಾಯಗಳ ಭಕ್ತಾದಿಗಳು ಕುಂಭೋತ್ಸವವನ್ನು ನಡೆಸಿ ದೇವಿಗೆ ಹರಕೆಯನ್ನು ತೀರಿಸಿದರು. ನಂತರ ಗ್ರಾಮವೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಸದ್ಭಕ್ತರು ದೇವಿಗೆ ಸೀರೆ, ಹಣ್ಣು,ಹೂ,ಕಾಯಿ ನೈವೇದ್ಯವನ್ನು ಸಮರ್ಪಿಸುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು.
ಜಾತ್ರಾ ಮಹೋತ್ಸವಕ್ಕೆ ಸಂಸದರಾದ ಈ.ತುಕಾರಾಂ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ ಸೇರಿದಂತೆ ಹಾಲಿ ಮಾಜಿ ಜನಪ್ರತಿನಿಧಿಗಳು ಭಾಗವಹಿಸಿ ದೇವಿಯ ಆರ್ಶೀವಾದವನ್ನು ಪಡೆದರಲ್ಲದೆ, ದೇವಿಯ ಕೃಫೆಯಿಂದ ನಾಡಿನಲ್ಲಿ ಸಮೃದ್ಧ ಮಳೆಯಾಗಿ ರೈತರಿಗೆ ಉತ್ತಮ ಫಸಲು ಲಭಿಸಿ, ಬೆಳೆಗೆ ತಕ್ಕ ಮೌಲ್ಯ ದೊರೆಯಲಿ ಎಂದು ಪ್ರಾರ್ಥಿಸಿದರಲ್ಲದೆ, ದೇವಿಯ ಆರ್ಶೀವಾದದಿಂದ ನಾಡಿನಲ್ಲಿ ಶಾಂತಿ,ನೆಮ್ಮದಿ, ಸಮೃದ್ಧಿ ನೆಲಸಲಿ,ನಾಡು ಸುಭೀಕ್ಷವಾಗಲಿ ಎಂದು ಪ್ರಾರ್ಥಿಸಿದರು. ಎರಡು ದಿನಗಳ ದೇವಿಯ ಜಾತ್ರಾ ಮಹೋತ್ಸವದಲ್ಲಿ ಉತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಉಸ್ತುವಾರಿ ವಹಿಸಿದ್ದರು. ಜಾತ್ರಾ ಮಹೋತ್ಸವದಲ್ಲಿ ಗ್ರಾಮವಷ್ಟೇ ಅಲ್ಲದೆ, ಬಳ್ಳಾರಿ,ವಿಜಯನಗರ ಅವಳಿ ಜಿಲ್ಲೆಗಳ ಸಾವಿರಾರು ಸದ್ಭಕ್ತರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
