ಬಳ್ಳಾರಿ / ಕಂಪ್ಲಿ : ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಸ್ಥಳಿಯ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಪದಾಧಿಕಾರಿಗಳು ಕಂಪ್ಲಿ ತಾಲ್ಲೂಕು ಜೆಸ್ಕಾಂ ಕಚೇರಿಯಲ್ಲಿ ಸಹಾಯಕ ಅಭಿಯಂತರ ವಿನೋದಕುಮಾರ್ ಬ್ಯಾಲಾಳ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾಧ್ಯಕ್ಷ ಬಿ. ಗಂಗಾಧರ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ನಡೆಸುತ್ತಿರುವ ಹುನ್ನಾರವನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ರೈತರ ಕೃಷಿ ಪಂಪ್ಸೆಟ್ಗಳಿಗೆ ಸ್ಮಾರ್ಟ್ ಕಾರ್ಡ್ ಮತ್ತು ಡಿಜಿಟಲ್ ಮೀಟರ್ ಅಳವಡಿಸಲು 10 ಸಾವಿರ ರೂಗಳ ಠೇವಣಿ ಶುಲ್ಕ ನಿಗದಿಪಡಿಸಿರುವುದನ್ನು ಕೂಡಲೇ ಹಿಂಪಡೆಯಬೇಕು. ಈ ಹಿಂದೆ ಅಕ್ರಮ – ಸಕ್ರಮದಡಿಯಲ್ಲಿ ರೈತರಿಗೆ ವಿದ್ಯುತ್ ಉಪಕರಣಗಳನ್ನು ಒದಗಿಸಿದಂತೆಯೇ ಉಚಿತ ವಿದ್ಯುತ್ ನೀಡಬೇಕು. ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ್ ಜೋಡಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಹನುಮಂತಪ್ಪ, ಉಪಾಧ್ಯಕ್ಷ ಲಕ್ಷಿರೆಡ್ಡಿ, ನಂ10 ಮುದ್ದಾಪುರ ಘಟಕದ ಅಧ್ಯಕ್ಷ ಬಿ.ಶಂಕರ್, ಉಪಾಧ್ಯಕ್ಷ ನೀಲಪ್ಪ ಬೋವಿ, ರಾಮಸಾಗರ ಘಟಕದ ಅಧ್ಯಕ್ಷ ಜಿ.ಮಂಜುನಾಥ್, ಕೆ.ಗೋವಿಂದಪ್ಪ, ಬಿ.ಕುಬೇರಪ್ಪ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















